ಬಳ್ಳಾರಿ : ಸಾರ್ವಜನಿಕರು ತಮ್ಮ ಮನೆಯ ಹೊರಗಿನ ನೀರು ಸಂಗ್ರಹಕಗಳಿಗೆ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಈಡಿಸ್ ಸೊಳ್ಳೆಗಳು ಮೊಟ್ಟೆ ಇಡದಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗದ ಸಹಕಾರದಲ್ಲಿ ಲಾರ್ವಾ ಸಮೀಕ್ಷಾ ಕಾರ್ಯದ ವಿಶೇಷ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಕಾಟಿಗುಡ್ಡ ವ್ಯಾಪ್ತಿಯಲ್ಲಿ ಶುಕ್ರವಾರ ಮನೆ ಭೇಟಿಯ ಸಮಿಕ್ಷಾ ಕಾರ್ಯ ಪರಿಶೀಲಿಸಿ ಅವರು ಮಾತನಾಡಿದರು.
ಡೆಂಗ್ಯು ರೋಗ ಹರಡುವ ಈಡಿಸ್ ಸೊಳ್ಳೆಗಳ ಸಂತತಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಮನೆಯ ಸುತ್ತಲೂ ನೀರು ನಿಲ್ಲದಂತೆ ಸ್ವಚ್ಚವಾಗಿಟ್ಟುಕೊಳ್ಳಬೇಕು. ಈ ಮೂಲಕ ಡೆಂಗ್ಯು ರೋಗ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಡೆಂಗ್ಯು ಪ್ರಕರಣಗಳು ಗಣನೀಯ ನಿಯಂತ್ರಣವಾಗಿದ್ದು, ವಿಶೇಷವಾಗಿ ನೀರು ಸಂಗ್ರಹಕಗಳಾದ ಡ್ರಮ್ ಬ್ಯಾರಲ್, ಕಲ್ಲಿನ ಡೋಣಿ, ಸಿಮೆಂಟ್ ತೊಟ್ಟಿ ಮುಂತಾದವುಗಳನ್ನು ವಾರದಲ್ಲಿ ಒಮ್ಮೆ ಚೆನ್ನಾಗಿ ತಿಕ್ಕಿ ತೊಳೆದು ನೀರು ತುಂಬುವುದಕ್ಕೆ ಆದ್ಯತೆ ನೀಡಬೇಕು ಎಂದರು. ಸ್ವಚ್ಚಗೊಳಿಸಲು ಸಾಧ್ಯವಿಲ್ಲದ ಪರಿಕರಗಳಿಗೆ ಟೆಮಿಫಾಸ್ ದ್ರಾವಣವನ್ನು ಹಾಕಲು ಸಹಕರಿಸಬೇಕು. ಅಲ್ಲದೆ ಈ ಖಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮುಂತಾದವು ಕಂಡು ಬಂದರೆ ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಎನ್ ವಿಬಿಡಿಸಿಪಿ ಜಿಲ್ಲಾ ಸಲಹೆಗಾರರು ಪ್ರತಾಪ್, ಆರೋಗ್ಯ ನಿರೀಕ್ಷಣಾಧಿಕಾರಿ ಶರತ್, ಚೇತನ್, ಪ್ರಾಥಮಿಕ ಅರೋಗ್ಯ ಸಂರಕ್ಷಣಾಧಿಕಾರಿ ಶ್ರೀಲಕ್ಷ್ಮೀ, ಮಲೇರಿಯಾ ಲಿಂಕ್ ವರ್ಕರ್ ಸೋಮಶೇಖರ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.