ಬೆಂಗಳೂರು: ಕರ್ನಾಟಕಕ್ಕೂ ಝೀಕಾ ವೈರಸ್ ಕಾಲಿಟ್ಟಿದೆ. ಜಿಗಣಿಯಲ್ಲಿ ಐವರಿಗೆ ಝೀಕಾ ವೈರಸ್ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ. ಸಾರ್ವಜನಿಕರು ಝಿಕಾ ವೈರಸ್ ಬಗ್ಗೆ ಭಯಬೇಡ. ಕೆಲ ಎಚ್ಚರಿಕೆ ಇರಲಿ ಅಂತ ಆರೋಗ್ಯ ಇಲಾಖೆ ಸೂಚಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಝಿಕಾ ವೈರಸ್ ಲಕ್ಷಣಗಳು ಅಂದ್ರೆ ಅತಿಯಾದ ತೆಲೆನೋವು, ಕೆಂಪಾದ ಕಣ್ಣು, ಜ್ವರ ಹಾಗೂ ಮೈಯಲ್ಲಿ ಗಂಧೆಗಳು ಉಂಟಾಗುತ್ತವೆ ಎಂದು ತಿಳಿಸಿದೆ.
ಈ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಅದು ಝೀಕಾ ವೈರಸ್ ಹೌದೋ ಅಲ್ಲವೋ ಎನ್ನುವ ಬಗ್ಗೆಯೂ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದೆ.
ಝೀಕಾ ವೈರಸ್ ಎಂದರೇನು?
ಝೀಕಾ ವೈರಸ್ ಸೊಳ್ಳೆಗಳ ಮೂಲಕ ವಾಹಕಗಳಾಗಿ ಹರಡುತ್ತದೆ. ಈಡಿಸ್ ಸೊಳ್ಳೆಗಳ ಮೂಲಕ ಈ ವೈರಸ್ ಹರಡುತ್ತದೆ. ಈ ವೈರಸ್ ಸಾಗಿಸುವ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ವೈರಸ್ ಮನುಷ್ಯರಿಗೆ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಝೀಕಾ ವೈರಸ್ ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ ಮೂಲಕವೂ ಹರಡಬಹುದು ಎಂದು ತಜ್ಞರು ಹೇಳುತ್ತಾರೆ.
ಝೀಕಾ ರೋಗದ ಲಕ್ಷಣಗಳೇನು?
ಸೌಮ್ಯ ಜ್ವರ
ದದ್ದುಗಳು
ಕಾಂಜಂಕ್ಟಿವಿಟಿಸ್
ಸ್ನಾಯು- ಕೀಲು ನೋವು
ಅಸ್ವಸ್ಥತೆ ಅಥವಾ ತಲೆನೋವು
ಮುನ್ನೆಚ್ಚರಿಕಾ ಕ್ರಮಗಳು ಏನು.?
ನಿಮ್ಮ ಮನೆಯಂಗಳದ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸದ್ಯ ಮಳೆ ಇರುವುದರಿಂದ ರಸ್ತೆಯ ಹೊಂಡಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಇಂತಹ ಕಡೆ ಸೊಳ್ಳೆಗಳು ಸಂತನೋತ್ಪತ್ತಿ ಹೆಚ್ಚಿಸಿಕೊಂಡು ಮನುಷ್ಯರ ಮೇಲೆ ಹಗಲಿನ ವೇಳೆ ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಣೆ ಪಡೆದುಕೊಳ್ಳಲು ಬೇಕಾದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು.