ಬೆಂಗಳೂರು : ಮದ್ಯಪಾನ ಮಾಡಿ ವಾಹನ ಚಲಾಯಿಸುವ ವಾಹನ ಸವಾರ/ಚಾಲಕರ ವಿರುದ್ಧ ವಿಶೇಷ ಕಾರ್ಯಚರಣೆಯನ್ನು ಕೈಗೊಂಡು ಪ್ರಕರಣಗಳನ್ನು ದಾಖಲಿಸುವ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಧೀಶರು ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರಾ ಶ್ರೀ ಅಭಯ್ ಮನೋಹರ್ ಸಪ್ರೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 19.12.2025 ರಂದು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆಯ ಕುರಿತು ನಡೆದ ಸಭೆಯಲ್ಲಿ ಮಾನ್ಯರವರು ಸಂಚಾರ ನಿಯಮ ಉಲ್ಲಂಘನೆಗಳ ಪ್ರಕರಣಗಳಲ್ಲಿ ಒಂದಾದ ಮದ್ಯಪಾನ ಮಾಡಿ, ವಾಹನ ಚಾಲನೆಯಿಂದ ಉಂಟಾಗುವ ರಸ್ತೆ ಅಪಘಾತಗಳ ಕುರಿತು ಹಾಗೂ ಈ ಕುರಿತು ವಿಶೇಷವಾಗಿ ನೂತನ ವರ್ಷಾಚರಣೆಯ ಸಂದರ್ಭದಲ್ಲಿಯೂ ಸಹ ಸಾರ್ವಜನಿಕರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳುಂಟಾಗಿ ಮೃತಪಡುವವರ ಮತ್ತು ಗಾಯಗೊಳ್ಳುವವರ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಇಂತಹ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ರಾಜ್ಯದ ಎಲ್ಲಾ ಘಟಕಗಳಲ್ಲಿ ವಿಶೇಷ ಕಾರ್ಯಚರಣೆಯನ್ನು ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿರುತ್ತಾರೆ.
ಆದ್ದರಿಂದ, ರಾಜ್ಯದ ಎಲ್ಲಾ ಘಟಕಾಧಿಕಾರಿಗಳು ತಮ್ಮ ತಮ್ಮ ಘಟಕಗಳ ವ್ಯಾಪ್ತಿಗೊಳಪಡುವ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಠಾಣಾಧಿಕಾರಿಗಳು ದಿನಾಂಕ:24.12.2025 ರಿಂದ 31.12.2025 ರವರೆಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವ ವಾಹನ ಸವಾರರ/ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ (Special drive) ನಡೆಸಿ, ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲು ಕ್ರಮ ಕೈಗೊಳ್ಳುವ ಜೊತೆಗೆ ಹೆಲೈಟ್ ಧರಿಸದೇ ಇರುವ, ಸೀಟ್ ಬೆಲ್ಟ್ ಧರಿಸದೇ ಇರುವ ವಾಹನ ಚಾಲಕರ ವಿರುದ್ಧ, ಅತೀವೇಗವಾಗಿ ವಾಹನ ಚಲಾಯಿಸುವ, ವೀಲಿಂಗ್ ಮಾಡುವ ವಾಹನ ಸವಾರರ ವಿರುದ್ಧ, ತ್ರಿಬಲ್ ರೈಡಿಂಗ್ ಮಾಡುವ ವಾಹನ ಸವಾರರ ವಿರುದ್ಧ, ಮತ್ತು ವಾಹನ ಚಲಾಯಿಸುವಾಗ ಮೊಬೈಲ್ ಬಳಸುವ ಚಾಲಕರ ವಿರುದ್ಧವೂ ಸಹ ಪ್ರಕರಣಗಳನ್ನು ದಾಖಲಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡಲು ಈ ಮೂಲಕ ಸೂಚಿಸಲಾಗಿದೆ.









