ಇತ್ತಿಚೆಗೆ ಆನ್ಲೈನ್ ವಂಚನೆ ಮಾಡುವ, ಆರ್ಥಿಕ ವಂಚನೆ ಮಾಡುವ ಅಪರಾಧಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ವಿಶೇಷವಾಗಿ ಸರಕಾರಿ ನೌಕರರು, ಅವರ ಕುಟುಂದವರು ಮತ್ತು ಪಿಂಚಣಿದಾರರು ಜಾಗೃತರಾಗಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬಾಂಬೆ ಸೆಬಿ (SEBI)ಯಿಂದ ಆಯೋಜಿಸಿದ್ದ ಪ್ರಾದೇಶಿಕ ಹೂಡಿಕೆದಾರರ ಜಾಗೃತಿ ಮತ್ತು ಆನ್ಲೈನ್ ಆರ್ಥಿಕ ವಂಚನೆ, ಸೈಬರ್ ಕ್ರೈಮಗಳ ಬಗ್ಗೆ ಸರಕಾರಿ ನೌಕರರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ನಿವೃತ್ತಿ ನಂತರ ಆರ್ಥಿಕ ಅನುಕೂಲತೆಗಳ ಇರಬೇಕು. ನೌಕರರು ಸೇವೆಯಲ್ಲಿದ್ದಾಗ ನಿಯಮಿತವಾಗಿ ಮತ್ತು ಸುರಕ್ಷಿತ ಕ್ಷೇತ್ರಗಳಲ್ಲಿ ಉಳಿತಾಯ ಮಾಡಬೇಕು. ಒಬ್ಬ ಹೂಡಿಕೆದಾರನಾಗಿ ಎನು ಮಾಡಬೇಕು ಮತ್ತು ಎನು ಮಾಡಬಾರದು ಎಂಬುದನ್ನು ತಿಳಿದಿರಬೇಕು. ಲಾಭದ ಆಸೆಯ ಮಾತುಗಳಿಗೆ ಮರುಳಾಗಬಾರದು. ಪ್ರತಿ ಸಂದರ್ಭದಲ್ಲಿಯೂ ಪರಿಶೀಲಿಸಿ, ಹೂಡಿಕೆಗೆ ಮುಂದುವರಿಯಬೇಕು ಎಂದು ಅವರು ಎಚ್ಚರಿಸಿದರು.
ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆ ಕ್ರಮಗಳು, ಹೂಡಿಕೆ ಮಾಡುವಾಗ ಪಾಲಿಸಬೇಕಾದ ನಿಯಮಗಳು ಮತ್ತು ವಂಚನೆಗಳಿಂದ ದೂರವಿರುವ ವಿಧಾನಗಳ ಬಗ್ಗೆ ಸರಕಾರಿ ನೌಕರರಿಗೆ ಮತ್ತು ವಿವಿಧ ಇಲಾಖೆಗಳ ಯೋಜನಾ ಫಲಾನುಭವಿಗಳಿಗೆ ತಿಳುವಳಿಕೆ ನೀಡುವುದು ಅಗತ್ಯವಿದೆ ಎಂದು ಅವರು ಹೇಳಿದರು.
ಯಾವುದೇ ರೀತಿಯಲ್ಲಿ ಹಣಕಾಸು ಹೂಡಿಕೆ ಮಾಡುವ ಮೊದಲು ಸರಿಯಾದ ಮಾಹಿತಿ ಸಂಗ್ರಹಿಸಿ, ಪರಿಶೀಲಿತ ಮೂಲಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಮತ್ತು ಸಂಶಯಾಸ್ಪದ ಯೋಜನೆಗಳಿಂದ ದೂರವಿರುವುದು ಅವಶ್ಯಕ ಎಂದು ಅವರು ಒತ್ತಿ ಹೇಳಿದರು.
ಸೆಬಿ, ಸ್ಟಾಕ್ ಎಕ್ಸಚೈಂಜ್, ಶೇರ್, ಡಿಬೆಂಚರ್ಗಳ ಬಗ್ಗೆ ಹೂಡಿಕೆ ಪೂರ್ವದಲ್ಲಿ ಮಾಹಿತಿ ಪಡೆಯಬೇಕು. ಅಂದಾಗ ವಂಚನೆಗಳಿಂದ ದೂರವಿರಬಹುದು. ತೆರಿಗೆ ಉಳಿತಾಯ, ತೆರಿಗೆ ವಿಧಿಸುವ ಹೊಸ ನಿಯಮಗಳ ಬಗ್ಗೆ ತಿಳಿದಿರಬೇಕು ಎಂದರು.
ಮೊಬೈಲ್ಗಳಿಗೆ ಅನೇಕ ತರನಾದ ಆ್ಯಪ್ಗಳು, ಪೈಲ್ಸ್ ಬರುತ್ತವೆ. ಅನಗತ್ಯವಾಗಿ ಅವುಗಳನ್ನು ಡೌನ್ಲೋಡ್ ಮಾಡಬಾರದು. ಇದರಿಂದ ನಿಮ್ಮ ಬ್ಯಾಂಕ್ ವಿವರ ಸೇರಿದಂತೆ ವೈಯಕ್ತಿಕ ಮಾಹಿತಿ ಸೋರಿಕೆ, ಕಳುವಾಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಸೆಬಿ ಹಿರಿಯ ಅಧಿಕಾರಿಗಳಾದ ಎಂ.ಆರ್.ವೆಂಕಟೇಶ ಬಾಬು ಅವರು ವರ್ಚುವಲ್ ಮೂಲಕ ಸೈಬರ್ ಅರಾಧಗಳು ಮತ್ತು ಸುರಕ್ಷಿತ ಹೂಡಿಕೆಗಳ ಬಗ್ಗೆ ಉಪನ್ಯಾಸ ನೀಡಿದರು.
ಅವರು ಮಾತನಾಡಿ, ಸೆಬಿ(SEBI)ನಿಯಮಾವಳಿಗಳು, ಹೂಡಿಕೆದಾರರ ಹಕ್ಕುಗಳು, ದೂರುಗಳ ನಿರ್ವಹಣಾ (grievance redressal) ವ್ಯವಸ್ಥೆ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹೊಸ ಪ್ರವೃತ್ತಿಗಳು ಹಾಗೂ ಕಾನೂನುಬದ್ಧ ಹೂಡಿಕೆ ಮಾರ್ಗಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಮತ್ತೋರ್ವ ಹಿರಿಯ ಅಧಿಕಾರಿ ಬದರಿ ನಾರಾಯಣ ಅವರು ಆನ್ ಲೈನ್ ವಂಚನೆಗಳು ಮತ್ತು ಆರ್ಥಿಕ ವಂಚನೆಗಳಿಂದ ಸುರಕ್ಷಿತವಾಗಿರುವ ಕ್ರಮಗಳ ಕುರಿತು ಮಾತನಾಡಿ, ಹೂಡಿಕೆದಾರರು ಮಾರುಕಟ್ಟೆಯಲ್ಲಿ ಉಂಟಾಗುವ ಅಪಾಯಗಳನ್ನು ತಿಳಿದುಕೊಂಡು ಜಾಣ್ಮೆಯಿಂದ ಹೂಡಿಕೆ ಮಾಡಬೇಕು. ಜೊತೆಗೆ ಕೆವೈಸಿ (KYC), ಪಾನ್ (PAN), ಡಿಮ್ಯಾಟ್ ಅಕೌಂಟ್ (Demat Account) ಮುಂತಾದ ಮೂಲಭೂತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಸಲಹೆ ನೀಡಿದರು.
ಜಾಗೃತಿ ಮತ್ತು ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಗುರಿಯಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಸರಕಾರಿ ನೌಕರರು, ಜಿಲ್ಲಾಮಟ್ಟದ ಅಧಿಕಾರಿಗಳು ಉಪನ್ಯಾಸಕರೊಂದಿಗೆ ಸಂವಾದ ಜರುಗಿಸಿದರು. ಹೂಡಿಕೆ ಸಂಬಂಧಿತ ಪ್ರಶ್ನೆಗಳನ್ನು ಕೇಳಿ ಪರಿಣಿತರಿಂದ ಸಮರ್ಪಕ ಉತ್ತರಗಳನ್ನು ಪಡೆದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ವೇದಿಕೆಯಲ್ಲಿದ್ದರು. ಲೆಕ್ಕ ಪರಿಶೋಧಕಿ ವೀಣಾ ಮುದಿಗೌಡರ ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ, ಜಿಲ್ಲಾ ಪಂಚಾಯತ ವಿವಿಧ ವಿಭಾಗಗಳ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.








