ಅಕ್ಟೋಬರ್ 2024 ರ ಮಾಹೆಗೆ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರಿಗೆ ಪಡಿತರ ಆಹಾರಧಾನ್ಯವನ್ನು ಬಿಡುಗಡೆ ಮಾಡಲಾಗಿದ್ದು, ಪಡಿತರ ಚೀಟಿದಾರರು ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.
ಅಕ್ಟೋಬರ್ ಮಾಹೆ 1ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಿಗ್ಗೆ 07 ರಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಾಯಂಕಾಲ 04 ರಿಂದ ರಾತ್ರಿ 09 ಗಂಟೆಯವರೆಗೆ ಮಂಗಳವಾರ ರಜಾ ಹೊರತುಪಡಿಸಿ ಉಳಿದ ದಿನಗಳಂದು ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ- ಕೆವೈಸಿ ಮಾಡುವ ಹಾಗೂ ಎನ್‍ಎಫ್‍ಎಸ್‍ಎ ಯಡಿ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಕಾರಣ ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಲು ತಿಳಿಸಿದೆ.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವದು.
ಅಕ್ಟೋಬರ್ 2024 ರ ಮಾಹೆಯ ಪಡಿತರ ವಿತರಣೆಯಲ್ಲಿ ಅಂತ್ಯೋದಯ (ಎಎವೈ) ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ ಅಕ್ಕಿ 21 ಕೆಜಿ, ಜೋಳ 14 ಕೆಜಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪಿಎಚ್‍ಎಚ್ (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ ಅಕ್ಕಿ 3 ಕೆಜಿ, ಜೋಳ 2 ಕೆಜಿ ಉಚಿತವಾಗಿ ವಿತರಿಸಲಾಗುತ್ತದೆ. ಅಂತರರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ.
ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಜರುಗಿಸಲಾಗುವದು. ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ, ಸಂಬಂಧಿಸಿದ ತಹಶೀಲದಾರ ಕಛೇರಿ ಅಥವಾ ಜಂಟಿ ನಿರ್ದೇಶಕರ ಕಛೇರಿ ಆಹಾರ ಇಲಾಖೆ ಇವರಿಗೆ ದೂರು ಸಲ್ಲಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಈ ದಾಖಲೆಗಳು ಕಡ್ಡಾಯ
ಪಡಿತರ ಚೀಟಿಯ ಒರಿಜಿನಲ್ ಪ್ರತಿ
ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋಕಾಪಿ
ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ
ಬ್ಯಾಂಕ್ ಪಾಸ್‌ಬುಕ್‌ನ ಫೋಟೋಕಾಪಿ
ಕುಟುಂಬದ ಯಜಮಾನನ ಎರಡು ಪಾಸ್‌ಪೋರ್ಟ್ ಅಳತೆಯ ಪೋಟೋ
ಪಡಿತರ ಚೀಟಿ ಮತ್ತು ಆಧಾರ್ ಅನ್ನು ಆನ್ ಲೈನ್ ನಲ್ಲಿ ಈ ರೀತಿ ಲಿಂಕ್ ಮಾಡಿ
ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್ಗೆ ಭೇಟಿ ನೀಡಿ.
ಸಕ್ರಿಯ ಕಾರ್ಡ್ನೊಂದಿಗೆ ಆಧಾರ್ ಲಿಂಕ್ ಆಯ್ಕೆ ಮಾಡಿ.
ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಮುಂದುವರಿಯಿರಿ / ಸಲ್ಲಿಸಿ ಬಟನ್ ಆಯ್ಕೆ ಮಾಡಿ.
ನೀವು ಈಗ ನಿಮ್ಮ ಮೊಬೈಲ್ ಫೋನ್ಗೆ ಒಟಿಪಿಯನ್ನು ಸ್ವೀಕರಿಸುತ್ತೀರಿ.
ಆಧಾರ್ ಪಡಿತರ ಲಿಂಕ್ ಪುಟದಲ್ಲಿ ಒಟಿಪಿಯನ್ನು ನಮೂದಿಸಿ, ಮತ್ತು ಅದಕ್ಕಾಗಿ ನಿಮ್ಮ ವಿನಂತಿಯನ್ನು ಈಗ ಸಲ್ಲಿಸಲಾಗಿದೆ.