ನಕಲಿ ವೈದ್ಯರ ಹಾವಳಿ ಗಂಭೀರವಾಗಿದ್ದು, ಸಾರ್ವಜನಿಕರು ನಕಲಿ ವೈದ್ಯರ ಕುರಿತು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದ್ದಾರೆ.
ಆರೋಗ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಹಲವರನ್ನು ಪತ್ತೆಹಚ್ಚಿ ಕ್ರಮ ಕೈಗೊಂಡಿದೆ. ಈ ನಕಲಿ ವೈದ್ಯರು ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಕ್ಲಿನಿಕ್‌ಗಳನ್ನು ತೆರೆದು ಬಡ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇವರನ್ನು ಮಟ್ಟಹಾಕಲು ದಂಡ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಸಂಪೂರ್ಣ ತಡೆಯಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಸರಿಯಾದ ವೈದ್ಯಕೀಯ ಪದವಿ (ಎಂಬಿಬಿಎಸ್, ಬಿಎಎಂಎಸ್, ಬಿಎಚ್‌ಎಂಎಸ್, ಬಿಡಿಎಸ್ ಮುಂತಾದವು) ಅಥವಾ ವೈದ್ಯಕೀಯ ಮಂಡಳಿಯ ನೋಂದಣಿ ಇಲ್ಲದೆ ಚಿಕಿತ್ಸೆ ನೀಡುವವರೇ ನಕಲಿ ವೈದ್ಯರಾಗಿರುತ್ತಾರೆ.
ತಪ್ಪಾದ ರೋಗನಿರ್ಣಯ ಅಥವಾ ಅಪಾಯಕಾರಿ ಔಷಧಿಗಳಿಂದ ರೋಗ ಗಂಭೀರವಾಗುವ ಸಾಧ್ಯತೆ ಮತ್ತು ಶಾಶ್ವತ ಹಾನಿ ಅಥವಾ ಮರಣಕ್ಕೂ ಕಾರಣವಾಗಬಹುದು. ಸಾರ್ವಜನಿಕರು ಕ್ಲಿನಿಕ್‌ನಲ್ಲಿ ರಿಜಿಸ್ಟ್ರೇಶನ ನಂಬರ್ ಪ್ರದರ್ಶಿಸಿಲ್ಲ, ಪದವಿ ಪ್ರಮಾಣಪತ್ರಗಳು ಸ್ಪಷ್ಟವಾಗಿ ಇಲ್ಲ ಎಂದಾದರೆ ಅವರು ನಕಲಿ ವೈದ್ಯರು ಎಂದು ಗಮನಿಸಬಹುದು.
ನಕಲಿ ವೈದ್ಯರು ಸಾಮಾನ್ಯವಾಗಿ ಎಲ್ಲಾ ರೋಗಕ್ಕೂ ಒಂದೇ ಔಷಧಿ ಎಂದು ಹೇಳುವುದು, ಅತೀ ಕಡಿಮೆ ಶುಲ್ಕಕ್ಕೆ ಗ್ಯಾರಂಟಿ ಚಿಕಿತ್ಸೆ ಎನ್ನುವುದು, ಇಂಜೆಕ್ಷನ್/ಡ್ರಿಪ್‌ಗಳನ್ನು ಅಗತ್ಯವಿಲ್ಲದೆ ನೀಡುವುದು ಮಾಡುವುದು ಕಂಡುಬರುತ್ತದೆ.
ಸಾರ್ವಜನಿಕರು ವೈದ್ಯರನ್ನು ಭೇಟಿಯಾಗುವ ಮೊದಲು ನೋಂದಣಿ ಸಂಖ್ಯೆ ಪರಿಶೀಲಿಸಿ. ಸರ್ಕಾರದ ಅಥವಾ ಮಾನ್ಯತೆ ಪಡೆದ ಆಸ್ಪತ್ರೆಗಳನ್ನು ಆಯ್ಕೆ ಮಾಡಬೇಕು. ಅನುಮಾನಾಸ್ಪದ ಚಿಕಿತ್ಸೆ ಕಂಡರೆ ದೂರು ನೀಡಿ, ಇತರರಿಗೆ ಜಾಗೃತಿ ಮೂಡಿಸಬೇಕು ಎಂದು ಡಿಹೆಚ್‌ಓ ಅವರು ತಿಳಿಸಿದ್ದಾರೆ.
ಕೆಲವರು ನಕಲಿ ವೈದ್ಯರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಹೆಸರು ಬಳಸಿಕೊಂಡು ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಅಥವಾ ಪೋಲೀಸ್ ಠಾಣೆಗೆ ದೂರು ನೀಡಬಹುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಂತಹ ನಕಲಿ ಕ್ಲಿನಿಕ್‌ಗಳಿಗೆ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ. ಅಂತಹ ನಕಲಿ ಕ್ಲಿನಿಕ್‌ಗಳು ಕಂಡುಬಂದಲ್ಲಿ ತಕ್ಷಣವೇ ಸೀಜ್ ಮಾಡಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ.
ನಗರ, ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬAದಲ್ಲಿ ದಯವಿಟ್ಟು ಅವರ ವೈದ್ಯಕೀಯ ಪದವಿಯ ಮಾಹಿತಿಯನ್ನು ಪಡೆದುಕೊಂಡು ಚಿಕಿತ್ಸೆ ಪಡೆಯಿರಿ, ಒಂದು ವೇಳೆ ನಕಲಿ ವೈದ್ಯರು ಎಂದು ಕಂಡುಬAದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ಕ್ರಮ ಜರುಗಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








