ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸಿಮ್ ಕಾರ್ಡ್ ಪಡೆಯುವವರೆಗೆ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಡ್ಡಾಯ. ಆದರೆ, ಮಾರುಕಟ್ಟೆಯಲ್ಲಿ ನಕಲಿ ಆಧಾರ್ ಕಾರ್ಡ್ಗಳ ಹಾವಳಿ ಹೆಚ್ಚಾಗುತ್ತಿದ್ದು, ನಿಮ್ಮಲ್ಲಿರುವ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂಬ ಸಂಶಯ ನಿಮಗಿದ್ದರೆ ಅದನ್ನು ಪರಿಶೀಲಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗ ಸುಲಭ ವಿಧಾನವನ್ನು ತಿಳಿಸಿಕೊಟ್ಟಿದೆ.
ಕೇವಲ ನಿಮ್ಮ ಕಾರ್ಡ್ ಮಾತ್ರವಲ್ಲದೆ, ಬಾಡಿಗೆದಾರರು ಅಥವಾ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಅವರ ಆಧಾರ್ ಕಾರ್ಡ್ ಅಸಲಿಯತ್ತನ್ನು ಸಹ ನೀವು ಈ ಮೂಲಕ ಪರೀಕ್ಷಿಸಬಹುದು.
ಪರಿಶೀಲಿಸುವ ಹಂತಗಳು ಇಲ್ಲಿವೆ:
ಆಧಾರ್ ಆಪ್ ಡೌನ್ಲೋಡ್ ಮಾಡಿ: ಮೊದಲಿಗೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಧಿಕೃತ ‘Aadhaar App’ ಅನ್ನು ಇನ್ಸ್ಟಾಲ್ ಮಾಡಿ ಮತ್ತು 6 ಅಂಕಿಗಳ ಸೆಕ್ಯೂರಿಟಿ ಪಿನ್ ಬಳಸಿ ಲಾಗಿನ್ ಆಗಿ.
QR ಕೋಡ್ ಸ್ಕ್ಯಾನರ್ ಬಳಸಿ: ಆಪ್ ತೆರೆದ ನಂತರ ಕೆಳಭಾಗದಲ್ಲಿರುವ ನೇವಿಗೇಶನ್ ಬಾರ್ನಲ್ಲಿ ‘QR Code Scanner’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.
ಕ್ಯಾಮೆರಾ ಮೂಲಕ ಸ್ಕ್ಯಾನ್ ಮಾಡಿ: ಈಗ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಆಗುತ್ತದೆ. ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ನಲ್ಲಿ ಮುದ್ರಿಸಲಾದ ಕ್ಯೂಆರ್ (QR) ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಮಾಹಿತಿ ತಾಳೆ ನೋಡಿ: ಸ್ಕ್ಯಾನ್ ಮಾಡಿದ ತಕ್ಷಣ ಆಧಾರ್ ಕಾರ್ಡ್ನಲ್ಲಿರುವ ವ್ಯಕ್ತಿಯ ಹೆಸರು, ವಿಳಾಸ, ಲಿಂಗ ಮತ್ತು ಫೋಟೋದಂತಹ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ. ಈ ವಿವರಗಳು ಕಾರ್ಡ್ನಲ್ಲಿರುವ ಮಾಹಿತಿಗೆ ಹೊಂದಿಕೆಯಾದರೆ ಅದು ಅಸಲಿ ಎಂದು ಅರ್ಥ. ಒಂದು ವೇಳೆ ಸ್ಕ್ಯಾನ್ ಆಗದಿದ್ದರೆ ಅಥವಾ ಮಾಹಿತಿ ತಪ್ಪಾಗಿದ್ದರೆ ಅದು ನಕಲಿ ಕಾರ್ಡ್ ಆಗಿರಬಹುದು.
ಯುವಿಡಿಎಐ (UIDAI) ಸಲಹೆ: ಸಾರ್ವಜನಿಕರು ಯಾವುದೇ ಅಪರಿಚಿತ ವ್ಯಕ್ತಿಯ ಆಧಾರ್ ಪಡೆಯುವಾಗ ಕೇವಲ ಕಾರ್ಡ್ ನೋಡಿ ನಂಬುವ ಬದಲು, ಅಧಿಕೃತ ಕ್ಯೂಆರ್ ಕೋಡ್ ಸ್ಕ್ಯಾನರ್ ಮೂಲಕ ಅದನ್ನು ದೃಢೀಕರಿಸಿಕೊಳ್ಳುವುದು ಸುರಕ್ಷಿತ ಎಂದು ಪ್ರಾಧಿಕಾರ ತಿಳಿಸಿದೆ.








