ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ನಾವು ಮಾಡುವ ಸಣ್ಣ ನಿರ್ಲಕ್ಷ್ಯ ನಮ್ಮ ಖಾಸಗಿ ಮಾಹಿತಿಯನ್ನು ಅಪಾಯಕ್ಕೆ ದೂಡಬಹುದು. ಬ್ಲೂಟೂತ್ (Bluetooth) ಅನ್ನು ಅನಗತ್ಯವಾಗಿ ಆನ್ ಮಾಡುವುದರಿಂದ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆ ಎಂದು ಇತ್ತೀಚಿನ ವರದಿಗಳು ಎಚ್ಚರಿಸಿವೆ.
ಹ್ಯಾಕರ್‌ಗಳು ಬಳಸುವ ತಂತ್ರಗಳು:
ಬ್ಲೂಟೂತ್ ಮೂಲಕ ಹ್ಯಾಕರ್‌ಗಳು ಮುಖ್ಯವಾಗಿ ಮೂರು ವಿಧಗಳಲ್ಲಿ ದಾಳಿ ಮಾಡುತ್ತಾರೆ:
1. ಬ್ಲೂಸ್ನಾರ್ಫಿಂಗ್ (Bluesnarfing): ಈ ತಂತ್ರದ ಮೂಲಕ ಹ್ಯಾಕರ್‌ಗಳು ನಿಮ್ಮ ಫೋನ್‌ನಲ್ಲಿರುವ ಸಂದೇಶಗಳು (Messages), ಫೋಟೋಗಳು, ಕಾಂಟ್ಯಾಕ್ಟ್ ಲಿಸ್ಟ್ ಮತ್ತು ಇತರ ಪ್ರಮುಖ ಡೇಟಾವನ್ನು ಕದಿಯಬಹುದು.
2. ಬ್ಲೂಬಗ್ಗಿಂಗ್ (Bluebugging): ಇದು ಅತ್ಯಂತ ಅಪಾಯಕಾರಿ. ಇದರ ಮೂಲಕ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನ ಸಂಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳಬಹುದು. ನಿಮ್ಮ ಫೋನ್‌ನಿಂದ ಅವರಿಗೆ ಬೇಕಾದ ಕರೆಗಳನ್ನು ಮಾಡಬಹುದು ಅಥವಾ ಇತರ ಮಾಹಿತಿಯನ್ನು ಲಪಟಾಯಿಸಬಹುದು.
3. ಬ್ಲೂಜಾಕಿಂಗ್ (Bluejacking): ನಿಮ್ಮ ಅನುಮತಿಯಿಲ್ಲದೆ ನಿಮ್ಮ ಬ್ಲೂಟೂತ್ ಸಾಧನಕ್ಕೆ ಸಂದೇಶಗಳು ಅಥವಾ ಫೈಲ್‌ಗಳನ್ನು ಕಳುಹಿಸಲು ಹ್ಯಾಕರ್‌ಗಳು ಈ ವಿಧಾನವನ್ನು ಬಳಸುತ್ತಾರೆ.
ರಕ್ಷಣೆ ಪಡೆಯುವುದು ಹೇಗೆ?
ಅನಗತ್ಯವಾಗಿ ಆನ್ ಮಾಡಬೇಡಿ: ಬ್ಲೂಟೂತ್ ಕೆಲಸ ಮುಗಿದ ತಕ್ಷಣ ಅದನ್ನು ಆಫ್ ಮಾಡುವುದನ್ನು ಮರೆಯಬೇಡಿ.
ಅಪರಿಚಿತ ಸಾಧನಗಳಿಂದ ದೂರವಿರಿ: ನಿಮಗೆ ತಿಳಿಯದ ಅಥವಾ ಅಪರಿಚಿತ ಸಾಧನಗಳಿಂದ ಬರುವ ಕನೆಕ್ಷನ್ ರಿಕ್ವೆಸ್ಟ್ ಅಥವಾ ಫೈಲ್‌ಗಳನ್ನು ಸ್ವೀಕರಿಸಬೇಡಿ.
ಸಾರ್ವಜನಿಕ ಸ್ಥಳಗಳಲ್ಲಿ ಜಾಗ್ರತೆ: ರೈಲ್ವೆ ನಿಲ್ದಾಣ, ಮಾಲ್ ಅಥವಾ ಕೆಫೆಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಬ್ಲೂಟೂತ್ ಆನ್ ಮಾಡುವುದು ಹೆಚ್ಚು ಅಪಾಯಕಾರಿ.
ನಿಮ್ಮ ಮೊಬೈಲ್ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಡಿಜಿಟಲ್ ಜಗತ್ತಿನಲ್ಲಿ ಸದಾ ಜಾಗರೂಕರಾಗಿರಿ.








