ಇಂದಿನ ಡಿಜಿಟಲ್ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳ ಹುಡುಕಾಟ ಕೂಡ ಬದಲಾಗಿದೆ. ಒಂದು ಕಾಲದಲ್ಲಿ ಪ್ರೀತಿ ಅಂದರೇನೆ ರೋಮಾಂಚನ, ಕವಿತೆಗಳ ಸಾಲುಗಳಾಗಿದ್ದವು. ಆದರೆ ಈಗ ಎಲ್ಲವೂ ಸ್ಮಾರ್ಟ್‌ಫೋನ್‌ನ ಬೆರಳ ತುದಿಯಲ್ಲಿದೆ. ಡೇಟಿಂಗ್ ಆ್ಯಪ್‌ಗಳು, ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳು ಮತ್ತು ಡಿಜಿಟಲ್ ಬಯೋಡೇಟಾಗಳು ಇಂದು ಹೊಸ ಸಂಬಂಧಗಳನ್ನು ನಿರ್ಧರಿಸುತ್ತಿವೆ.
ಮುಖ ಪರಿಚಯವಿಲ್ಲದ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯಲ್ಲಿ ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಆದ್ದರಿಂದ ಡೇಟಿಂಗ್ ಲೋಕಕ್ಕೆ ಕಾಲಿಡುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.
ಡೇಟಿಂಗ್ ಆ್ಯಪ್‌ನಲ್ಲಿ ನೀವು ಮಾಡಬಾರದ ತಪ್ಪುಗಳು (Don’ts)
ವೈಯಕ್ತಿಕ ರಹಸ್ಯಗಳನ್ನು ಹಂಚಿಕೊಳ್ಳಬೇಡಿ: ಆ್ಯಪ್‌ನಲ್ಲಿ ಯಾರಾದರೂ ಇಷ್ಟವಾದ ಕೂಡಲೇ ಅಥವಾ ಅವರ ಮಾತುಗಳು ಚಂದ ಎನಿಸಿದ ಕೂಡಲೇ ನಿಮ್ಮ ಮನೆಯ ವಿಳಾಸ, ಬ್ಯಾಂಕ್ ವಿವರ ಅಥವಾ ವೈಯಕ್ತಿಕ ರಹಸ್ಯಗಳನ್ನು ಹಂಚಿಕೊಳ್ಳಬೇಡಿ. ಕೇವಲ ಚಾಟಿಂಗ್ ಮಾಡುತ್ತಿರುವುದರಿಂದಲೇ ಅದು ಗಾಢವಾದ ಸಂಬಂಧವಾಗುವುದಿಲ್ಲ. ಎದುರಿಗಿರುವ ವ್ಯಕ್ತಿಯ ಗುಣ ಪೂರ್ತಿಯಾಗಿ ತಿಳಿಯುವವರೆಗೂ ‘ಓಪನ್ ಬುಕ್’ ಆಗಬೇಡಿ.
ಸೋಷಿಯಲ್ ಮೀಡಿಯಾ ‘ಸ್ಪೈಯಿಂಗ್’ ಬೇಡ: ಒಬ್ಬ ವ್ಯಕ್ತಿ ಇಷ್ಟವಾದ ಕೂಡಲೇ ಅವರ ಹಳೆಯ ಫೋಟೋಗಳು, ಹಳೆಯ ಪೋಸ್ಟ್‌ಗಳನ್ನು ಹುಡುಕಿ ನೋಡುವುದು ಸಾಮಾನ್ಯ. ಆದರೆ ಅವರ ಹಳೆಯ ಜೀವನದ ಬಗ್ಗೆ ಅನಗತ್ಯವಾಗಿ ಸಂಶಯ ಪಡುವುದು ಅಥವಾ ಅವರನ್ನು ಪ್ರಶ್ನಿಸುವುದು ನಿಮ್ಮ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗತಕಾಲಕ್ಕಿಂತ ವರ್ತಮಾನ ಮುಖ್ಯ ಎಂಬುದನ್ನು ಮರೆಯಬೇಡಿ.
‘ರೆಡ್ ಫ್ಲ್ಯಾಗ್’ಗಳನ್ನು ನಿರ್ಲಕ್ಷಿಸಬೇಡಿ: ಪರಿಚಯವಾದ ಕೆಲವೇ ದಿನಗಳಲ್ಲಿ ಆ ವ್ಯಕ್ತಿ ಅತಿಯಾದ ಹಕ್ಕು ಚಲಾಯಿಸುತ್ತಿದ್ದರೆ, ಜೋಕ್ ಹೆಸರಿನಲ್ಲಿ ನಿಮ್ಮನ್ನು ಅವಮಾನಿಸುತ್ತಿದ್ದರೆ ಅಥವಾ ನಿಮ್ಮ ನೇರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದರೆ ಎಚ್ಚರದಿಂದಿರಿ. ಇಂತಹ ನಡವಳಿಕೆಯನ್ನು ಸಹಿಸಬೇಡಿ. ಅಂತಹ ಸಂದರ್ಭದಲ್ಲಿ ಸಂಬಂಧವನ್ನು ಅಲ್ಲಿಗೇ ಕಡಿದುಕೊಳ್ಳುವುದು ಸೂಕ್ತ.
ಡೇಟಿಂಗ್ ಆ್ಯಪ್‌ನಲ್ಲಿ ನೀವು ಮಾಡಬೇಕಾದ ಕೆಲಸಗಳು (Dos)
ಉದ್ದೇಶದ ಬಗ್ಗೆ ಸ್ಪಷ್ಟತೆ ಇರಲಿ: ನೀವು ಡೇಟಿಂಗ್ ಆ್ಯಪ್ ಬಳಸುತ್ತಿರುವುದು ಜೀವನ ಸಂಗಾತಿಯ ಹುಡುಕಾಟಕ್ಕಾಗಿಯೇ? ಅಥವಾ ಕೇವಲ ಸಮಯ ಕಳೆಯಲಿಕ್ಕಾಗಿಯೇ? ಎಂಬ ಸ್ಪಷ್ಟತೆ ನಿಮಗಿರಲಿ. ಹಾಗೆಯೇ ನೀವು ಮಾತನಾಡುತ್ತಿರುವ ವ್ಯಕ್ತಿಯ ಉದ್ದೇಶವೂ ನಿಮ್ಮಂತೆಯೇ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಬ್ಬರ ದಾರಿಗಳು ಬೇರೆ ಇದ್ದಾಗ ಸಮಯ ವ್ಯರ್ಥ ಮಾಡುವುದು ಬೇಡ.
ಪ್ರಾಮಾಣಿಕತೆ ಇರಲಿ: ನಿಮ್ಮ ಪ್ರೊಫೈಲ್ ಆಕರ್ಷಕವಾಗಿರಲಿ ಎಂಬ ಕಾರಣಕ್ಕೆ ಸುಳ್ಳು ಮಾಹಿತಿಯನ್ನು ನೀಡಬೇಡಿ. ಬೇರೆಯವರನ್ನು ಮೆಚ್ಚಿಸಲು ನೀಡುವ ಸುಳ್ಳು ಮಾಹಿತಿ ದೀರ್ಘಕಾಲದ ಸಂಬಂಧಕ್ಕೆ ಅಡಿಪಾಯವಾಗಲಾರದು. ನಿಮ್ಮ ಅಸಲಿ ವ್ಯಕ್ತಿತ್ವವನ್ನು ತೋರಿಸಿದಾಗ ಮಾತ್ರ ನಿಮಗೆ ಸೂಕ್ತವಾದ ವ್ಯಕ್ತಿ ಸಿಗಲು ಸಾಧ್ಯ.
ಆಸಕ್ತಿಗಳ ಬಗ್ಗೆ ಚರ್ಚಿಸಿ: ಇಬ್ಬರ ನಡುವಿನ ಸಂಭಾಷಣೆ ಕೇವಲ ‘ಹಾಯ್, ಹಲೋ’ಗೆ ಸೀಮಿತವಾಗಬಾರದು. ನಿಮಗೆ ಇಷ್ಟವಾದ ಪುಸ್ತಕಗಳು, ಚಲನಚಿತ್ರಗಳು ಅಥವಾ ಹವ್ಯಾಸಗಳ ಬಗ್ಗೆ ಚರ್ಚಿಸಿ. ಅಭಿರುಚಿಗಳು ಒಂದಾದಾಗ ಸ್ನೇಹ ಮತ್ತು ಪ್ರೀತಿ ಮತ್ತಷ್ಟು ಆಳವಾಗುತ್ತದೆ.
ಗಮನಿಸಿ: ತಂತ್ರಜ್ಞಾನ ಎಷ್ಟೇ ಬೆಳೆದರೂ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಆನ್‌ಲೈನ್ ಸಂಬಂಧಗಳಲ್ಲಿ ಉತ್ಸಾಹದ ಜೊತೆಗೆ ವಿವೇಚನೆಯೂ ಮುಖ್ಯ.








