ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕು, ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ.78 ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಸುಮಾರು 1.5 ಕಿ.ಮೀ ಉದ್ದದ ಡಾಂಬರು ರಸ್ತೆಯನ್ನು ಇಂದು ತೆರವುಗೊಳಿಸಲಾಗಿದ್ದು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ತಿಳಿಸಿದ್ದಾರೆ.
ಗ್ರಾಮದ ಸರ್ವೆ ನಂ.76/1, 76/2, 76/3, 76/4, 77/2 ರ ಜಮೀನುಗಳಲ್ಲಿ ಹರಿನಾಥ ರೆಡ್ಡಿ, ಪಂಚಮಿ ಡೆವಲಪರ್ಸ್, ನಂ.1609, 60 ಅಡಿ ರಸ್ತೆ, ‘ಬಿ’ ಬ್ಲಾಕ್, ಸಿ.ಕ್ಯೂ.ಎ.ಎಲ್ ಲೇಔಟ್, ಸಹಕಾರನಗರ, ಬೆಂಗಳೂರು-92 ರವರು ಸುಮಾರು 5-00 ಎಕರೆಯ (ಒಂದು ಎಕರೆಗೆ 1.5 ಕೋಟಿ ಮೌಲ್ಯದಂತೆ ಒಟ್ಟು ಸುಮಾರು 7.5 ಕೋಟಿ ಮೌಲ್ಯದ) ಸುಮಾರು 1.5 ಕಿ.ಮೀ ಉದ್ದದ 60 ಅಡಿ ಅಗಲದ ಅನಧಿಕೃತ ಡಾಂಬರು ರಸ್ತೆಯನ್ನು ನಿರ್ಮಿಸಿದ್ದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಅವರ ನಿರ್ದೇಶನದಂತೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಇಂದು ಯಲಹಂಕ ತಹಶೀಲ್ದಾರ್ ಶ್ರೇಯಸ್.ಜಿ.ಎಸ್ ಮತ್ತು ಕಂದಾಯ ಅಧಿಕಾರಿ/ಸಿಬ್ಬಂದಿಗಳು ಹಾಗೂ ರಾಜಾನುಕುಂಟೆ ಪೊಲೀಸ್ ರವರ ಸಮಕ್ಷಮದಲ್ಲಿ ಸರ್ಕಾರಿ ಜಮೀನಿನಲ್ಲಿನ ಅನಧಿಕೃತ ಡಾಂಬರೀಕರಣದ ರಸ್ತೆಯನ್ನು ತೆರವುಗೊಳಿಸಿ, ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








