ಗುರುಗ್ರಾಮ್ : ಮನೆಗಳಲ್ಲಿ ಏರ್ ಕಂಡೀಶನ್ ಬಳಸುವವರೇ ಎಚ್ಚರ. ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಏರ್ ಕಂಡಿಷನರ್ ಸ್ಪೋಟಗೊಂಡು ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಗುರುಗ್ರಾಮದ ಮಾರುತಿ ಕುಂಜ್ ಸೊಸೈಟಿಯಲ್ಲಿ ಗುರುವಾರ ತಡರಾತ್ರಿ ಘೋರ ದುರಂತ ಸಂಭವಿಸಿದೆ. ರಾತ್ರಿ ಸೊಸೈಟಿಯ ಮನೆಯಲ್ಲಿ ಏರ್ ಕಂಡೀಶನ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಯುವಕ ಜೀವಂತವಾಗಿ ಸುಟ್ಟುಹೋಗಿದ್ದಾನೆ.
ಮೃತ ಯುವಕನನ್ನು ಭವಾನಿ ಜಿಲ್ಲೆಯ ಕಂಕ್ರೋಲಿ ಮೂಲದ 37 ವರ್ಷದ ಸಂಜಯ್ ಕುಮಾರ್ ಎಂದು ಗುರಿತಿಸಲಾಗಿದ್ದು, ಮೃತರನ್ನು ರಕ್ಷಿಸಲು ನೆರೆಹೊರೆಯವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. 45 ನಿಮಿಷಗಳ ಕಠಿಣ ಪರಿಶ್ರಮದ ನಂತರ, ಅಗ್ನಿಶಾಮಕ ಇಲಾಖೆ ಬೆಂಕಿಯನ್ನು ನಿಯಂತ್ರಿಸಿತು. ಅಷ್ಟೊತ್ತಿಗಾಗಲೇ ಇಡೀ ಮನೆ ಸುಟ್ಟು ಬೂದಿಯಾಗಿತ್ತು. ಬೆಂಕಿ ಅವಘಡಕ್ಕೆ ಏರ್ ಕಂಡಿಶನ್ ಸ್ಪೋಟವೇ ಕಾರಣ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಭೋಂಡ್ಸಿಯ ಮಾರುತಿ ಕುಂಜ್ ಸೊಸೈಟಿಯ ಬಿ ಬ್ಲಾಕ್ನ ಮನೆ ಸಂಖ್ಯೆ -101 ರ ಮೊದಲ ಮಹಡಿಯಲ್ಲಿ ಗುರುವಾರ ರಾತ್ರಿ 12 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಇಡೀ ಮನೆಗೆ ಹರಡಿತು. ರಾತ್ರಿ ಮನೆಯಲ್ಲಿ ಒಬ್ಬಂಟಿಯಾಗಿ ಮಲಗಿದ್ದ ಸಂಜಯ್ ಹೊರಗೆ ಬರಲು ಸಾಧ್ಯವಾಗದೆ ಜೀವಂತವಾಗಿ ಸುಟ್ಟುಹೋಗಿದ್ದಾನೆ.
ಭೋಂಡ್ಸಿ ಪೊಲೀಸ್ ಠಾಣೆಯು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಿ ಕುಟುಂಬಕ್ಕೆ ಮಾಹಿತಿ ನೀಡಿತು.