ಹಾಸನ : ಅಪರಿಚಿತರ ಕೈಗೆ ಎಟಿಎಂ ಕೊಡುವ ಮುನ್ನ ಎಚ್ಚರವಾಗಿರಿ, ಹಾಸನದಲ್ಲಿ ಯುವಕನೊಬ್ಬ ಮಹಿಳೆಗೆ 50 ಸಾವಿರ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಎಟಿಎಂ ಕಾರ್ಡ್ ಬದಲಿಸಿ ಮಹಿಳೆಗೆ 50,000 ರೂ. ವಂಚಿಸಲಾಗಿದೆ. ಪದ್ಮಾ ಹಣ ಕಳೆದುಕೊಂಡ ಮಹಿಳೆ. ಕರ್ನಾಟಕ ಬ್ಯಾಂಕ್ ಎಟಿಎಂಗೆ ಹಣ ಪಡೆಯಲು ಹೋಗಿದ್ದ ವೇಳೆ ಅಪರಿಚಿತ ಯುವಕನ ನೆರವು ಕೇಳಿದ್ದಾರೆ. ಮೊದಲು ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ಪರಿಶೀಲಿಸಿದ ಯುವಕ ಪದ್ಮಾ ಖಾತೆಯಲ್ಲಿ ಹೆಚ್ಚಿನ ಹಣ ಇರುವುದನ್ನು ಗಮನಿಸಿದ್ದಾನೆ. ಬಳಿಕ 10,000 ರೂ.ಗಳನ್ನು ಡ್ರಾ ಮಾಡಿಕೊಟ್ಟಿದ್ದಾನೆ. ನಂತರ ಪದ್ಮಾಗೆ ಎಟಿಎಂನಲ್ಲಿ ಹಣ ಖಾಲಿಯಾಗಿದೆ ಎಂದು ಹೇಳಿ ಪದ್ಮಾ ಅವರಿಗೆ ಎಟಿಎಂ ಕಾರ್ಡ್ ಬದಲಿಸಿ ಬೇರೆ ಕಾರ್ಡ್ ಕೊಟ್ಟಿದ್ದಾನೆ.
ಮಹಿಳೆ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಗೆ ಹಣ ಕಟ್ ಆಗಿರುವ ಮೆಸೇಜ್ ಬಂದಿದೆ. ತಮ್ಮ ಖಾತೆಯಿಂದ ಹಣ ಖಾಲಿಯಾಗುತ್ತಿರುವ ಮೆಸೇಜ್ ಬಂದ ತಕ್ಷಣ ಬ್ಯಾಂಕಿಗೆ ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆಗಾಗಲೇ 50,000 ಹಣ ಡ್ರಾ ಮಾಡಿಕೊಂಡು ವಂಚಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.