ಬೇಸಿಗೆ ಕಾಲದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದರಿಂದ ಹೆಚ್ಚಿನ ಮನೆಗಳಲ್ಲಿ ಇನ್ವರ್ಟರ್‌ಗಳ ಬಳಕೆ ಅನಿವಾರ್ಯವಾಗಿದೆ. ಆದರೆ, ಇನ್ವರ್ಟರ್ ಬ್ಯಾಟರಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದು ಬೇಗನೆ ಕೆಟ್ಟುಹೋಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಬ್ಯಾಟರಿಗೆ ಹಾಕುವ ನೀರಿನ ಬಗ್ಗೆ ಹೆಚ್ಚಿನವರು ನಿರ್ಲಕ್ಷ್ಯ ವಹಿಸುತ್ತಾರೆ. ಇನ್ವರ್ಟರ್ ಬ್ಯಾಟರಿಗೆ ಕೇವಲ ಡಿಸ್ಟಿಲ್ಡ್ ವಾಟರ್ (Distilled Water – ಆಸವಿತ ಜಲ) ಅನ್ನೇ ಏಕೆ ಬಳಸಬೇಕು ಮತ್ತು ನಳದ ನೀರು ಬಳಸುವುದರಿಂದ ಆಗುವ ನಷ್ಟಗಳೇನು ಎಂಬುದರ ವಿವರ ಇಲ್ಲಿದೆ.
ಡಿಸ್ಟಿಲ್ಡ್ ವಾಟರ್ ಏಕೆ ಅವಶ್ಯಕ?
ಡಿಸ್ಟಿಲ್ಡ್ ವಾಟರ್ ಅನ್ನು ನೀರನ್ನು ಕುದಿಸಿ, ಅದರ ಹಬೆಯನ್ನು ತಂಪು ಮಾಡುವ ಮೂಲಕ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀರಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕ್ಲೋರೈಡ್‌ನಂತಹ ಖನಿಜಗಳು ಸಂಪೂರ್ಣವಾಗಿ ಹೊರಹೋಗುತ್ತವೆ. ಬ್ಯಾಟರಿಯ ಒಳಗಿರುವ ಸಲ್ಫ್ಯೂರಿಕ್ ಆಮ್ಲವು ಕೇವಲ ಶುದ್ಧ ನೀರಿನೊಂದಿಗೆ ಮಾತ್ರ ಸರಿಯಾಗಿ ರಾಸಾಯನಿಕ ಪ್ರಕ್ರಿಯೆ ನಡೆಸಬಲ್ಲದು. ಇದು ಬ್ಯಾಟರಿಯ ಪ್ಲೇಟ್‌ಗಳು ತುಕ್ಕು ಹಿಡಿಯದಂತೆ ತಡೆಯುತ್ತದೆ ಮತ್ತು ಬ್ಯಾಟರಿಯ ಬ್ಯಾಕಪ್ ಸಾಮರ್ಥ್ಯವನ್ನು ದೀರ್ಘಕಾಲದವರೆಗೆ ಕಾಯ್ದುಕೊಳ್ಳುತ್ತದೆ.
ನಳದ ನೀರು (Tap Water) ಬಳಸುವುದರಿಂದ ಆಗುವ ಅಪಾಯಗಳು:
ಅನೇಕರು ಮಾಹಿತಿಯ ಕೊರತೆಯಿಂದಾಗಿ ಬ್ಯಾಟರಿಗೆ ನಲ್ಲಿಯ ನೀರು ಅಥವಾ ಕುಡಿಯುವ ನೀರನ್ನು ಹಾಕುತ್ತಾರೆ. ಇದು ಬ್ಯಾಟರಿಗೆ ಮಾರಕವಾಗಬಹುದು:
ಪ್ಲೇಟ್‌ಗಳ ಮೇಲೆ ಖನಿಜಗಳ ಶೇಖರಣೆ: ನಳದ ನೀರಿನಲ್ಲಿರುವ ಖನಿಜಗಳು ಬ್ಯಾಟರಿಯ ಲೆಡ್ ಪ್ಲೇಟ್‌ಗಳ ಮೇಲೆ ಪದರದಂತೆ ಕುಳಿತುಕೊಳ್ಳುತ್ತವೆ. ಇದರಿಂದ ವಿದ್ಯುತ್ ಪ್ರವಾಹಕ್ಕೆ ಅಡ್ಡಿಯಾಗುತ್ತದೆ.
ಶಾರ್ಟ್ ಸರ್ಕ್ಯೂಟ್ ಭೀತಿ: ನೀರಿನಲ್ಲಿರುವ ಅಶುದ್ಧತೆಯು ಬ್ಯಾಟರಿಯ ಒಳಗೆ ಶಾರ್ಟ್ ಸರ್ಕ್ಯೂಟ್ ಉಂಟುಮಾಡಬಹುದು.
ವಾರೆಂಟಿ ರದ್ದು: ಹಲವು ಕಂಪನಿಗಳು ಬ್ಯಾಟರಿ ತಪಾಸಣೆ ಮಾಡುವಾಗ ಅಶುದ್ಧ ನೀರು ಬಳಸಿರುವುದು ಪತ್ತೆಯಾದರೆ, ವಾರೆಂಟಿ ಸೌಲಭ್ಯವನ್ನು ನೀಡಲು ನಿರಾಕರಿಸುತ್ತವೆ.
ಬ್ಯಾಟರಿ ನಿರ್ವಹಣೆಗೆ ಕೆಲವು ಪ್ರಮುಖ ಸಲಹೆಗಳು:
ಇಂಡಿಕೇಟರ್ ಗಮನಿಸಿ: ಬ್ಯಾಟರಿಯ ನೀರಿನ ಮಟ್ಟವನ್ನು ಸೂಚಿಸುವ ಇಂಡಿಕೇಟರ್ ‘ಕೆಂಪು’ ಗುರುತಿಗೆ ಬರುವ ಮುನ್ನವೇ ನೀರನ್ನು ತುಂಬಿಸಿ. ನೀರು ಸಂಪೂರ್ಣವಾಗಿ ಖಾಲಿಯಾಗಲು ಬಿಡಬೇಡಿ.
ಮಿತಿ ಮೀರಿ ನೀರು ಹಾಕಬೇಡಿ: ನಿಗದಿತ ಮಟ್ಟಕ್ಕಿಂತ ಹೆಚ್ಚು ನೀರು ತುಂಬಿಸಿದರೆ, ಚಾರ್ಜಿಂಗ್ ಸಮಯದಲ್ಲಿ ಅದು ಹೊರಬಂದು ನೆಲವನ್ನು ಹಾಳುಮಾಡಬಹುದು.
ಚಾರ್ಜಿಂಗ್ ನಂತರ ನೀರು ತುಂಬಿಸಿ: ಬ್ಯಾಟರಿ ಸಂಪೂರ್ಣ ಚಾರ್ಜ್ ಆದ ನಂತರ ನೀರು ತುಂಬಿಸುವುದು ಉತ್ತಮ, ಇದರಿಂದ ಎಲೆಕ್ಟ್ರೋಲೈಟ್ ಸಾಂದ್ರತೆಯು ಸರಿಯಾಗಿರುತ್ತದೆ.
ಗುಣಮಟ್ಟದ ನೀರು ಬಳಸಿ: ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಅಥವಾ ಅಶುದ್ಧ ನೀರನ್ನು ಬಳಸಬೇಡಿ. ಯಾವಾಗಲೂ ಪ್ರಮಾಣೀಕೃತ ಬ್ರಾಂಡ್‌ನ ಡಿಸ್ಟಿಲ್ಡ್ ವಾಟರ್ ಅನ್ನೇ ಬಳಸಿ.
ಕೆಲವೇ ರೂಪಾಯಿಗಳನ್ನು ಉಳಿಸಲು ಹೋಗಿ ನಳದ ನೀರು ಬಳಸಿದರೆ, ಸಾವಿರಾರು ರೂಪಾಯಿ ಬೆಲೆಬಾಳುವ ಬ್ಯಾಟರಿಯನ್ನು ಕೆಲವೇ ತಿಂಗಳಲ್ಲಿ ಕಳೆದುಕೊಳ್ಳಬೇಕಾದೀತು. ಆದ್ದರಿಂದ ಬ್ಯಾಟರಿ ಆರೋಗ್ಯದ ಕಡೆಗೆ ಗಮನವಿರಲಿ.








