ಬೆಂಗಳೂರು : ರಾಜ್ಯದ ಮೂರು ಪ್ರಮುಖ ಕ್ಷೇತ್ರಗಳ ಉಪಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ ಬಿದ್ದಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರೆಲ್ಲರೂ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ ಇದೀಗ ಅಲ್ಲಿಂದ ತೆರಳಿದ್ದಾರೆ. ಹಾಗಾಗಿ ಇಂದಿನಿಂದ ಎರಡು ದಿನಗಳ ಕಾಲ ಮೂರು ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಕಳೆದ ಹಲವು ದಿನಗಳಿಂದ ಚನ್ನಪಟ್ಟಣ ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಭರ್ಜರಿ ಪ್ರಚಾರ ಮಾಡಿದರು. ಈ ವೇಳೆ ಪರಸ್ಪರ ನಾಯಕರ ವಾಕ್ಸಮರ ತೀವ್ರ ತಾರಕಕ್ಕೆ ಏರಿತ್ತು. ಹಾಗಾಗಿ ಇಂದು ಅಂತಿಮವಾಗಿ ಸಂಜಯ್ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ NDA ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಸ್ಪರ್ಧಿಸುತ್ತಿದ್ದಾರೆ.
ಅದೇ ರೀತಿಯಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಅವರು ಸ್ಪರ್ಧಿಸುತ್ತಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಪಠಾಣ್ ಅವರು ಸ್ಪರ್ಧಿಸುತ್ತಿದ್ದಾರೆ.
ನವೆಂಬರ್ 13 ರಂದು ಮತದಾನ ನಡೆಯೋದ್ರಿಂದ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಇಂದು ಸಂಜೆ 6 ಗಂಟೆಯಿಂದ ನವೆಂಬರ್ 14 ರ ಬೆಳಗ್ಗೆ 6 ಗಂಟೆವರೆಗೂ ಮದ್ಯಮಾರಾಟ ಮಾಡುವಂತಿಲ್ಲ. ಹಾಗಾಗಿ ಮದ್ಯಪ್ರಿಯರು ಎದ್ನೋ ಬಿದ್ನೋ ಎಂಬಂತೆ ಬಾರ್ ಅಂಗಡಿಗಳ ಮೇಲೆ ಮುಗಿಬಿದ್ದು, ಮದ್ಯ ಖರೀದಿಸಿ ಸ್ಟಾಕ್ ಮಾಡಿಕೊಂಡಿದ್ದಾರೆ.