ಸಿಡ್ನಿ:ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಈದ್-ಉಲ್-ಫಿತರ್ ಪ್ರಾರ್ಥನೆಯಲ್ಲಿ ಭಾಗವಹಿಸಲು ಸಿಡ್ನಿಯ ಅತಿದೊಡ್ಡ ಮಸೀದಿಯಾದ ಲಕೆಂಬಾ (Lakemba) ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಗಾಜಾ ಯುದ್ಧ ಮತ್ತು ಇಸ್ರೇಲ್ ವಿಷಯದಲ್ಲಿ ಸರ್ಕಾರದ ಮೃದು ಧೋರಣೆಯನ್ನು ಖಂಡಿಸಿ ಅಲ್ಲಿ ನೆರೆದಿದ್ದ ನೂರಾರು ಜನರು ಪ್ರಧಾನಿಯ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆದಿದೆ.
ಅಲ್ಬನೀಸ್ ಅವರು ಮಸೀದಿಗೆ ಆಗಮಿಸುತ್ತಿದ್ದಂತೆ, ಕೆಲವು ಪ್ರತಿಭಟನಾಕಾರರು ಅವರನ್ನು “ಲಜ್ಜೆಗೆಟ್ಟವರು” (Shame on you) ಮತ್ತು “ನರಮೇಧದ ಬೆಂಬಲಿಗರು” ಎಂದು ಕೂಗುತ್ತಾ ತರಾಟೆಗೆ ತೆಗೆದುಕೊಂಡರು.ಪ್ಯಾಲೇಸ್ಟಿನಿಯನ್ ನಾಗರಿಕರ ಸಾವು-ನೋವಿನ ಬಗ್ಗೆ ಆಸ್ಟ್ರೇಲಿಯಾ ಸರ್ಕಾರವು ಕಠಿಣ ನಿಲುವು ತಳೆಯುತ್ತಿಲ್ಲ ಮತ್ತು ಇಸ್ರೇಲ್ಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂಬುದು ಅಲ್ಲಿನ ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಸೀದಿಯ ಸಂಘಟಕರು ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಭದ್ರತಾ ಕಾರಣಗಳಿಗಾಗಿ ಪ್ರಧಾನಿಯವರು ಮಸೀದಿಯ ಹಿಂಬಾಗಿಲಿನಿಂದ ನಿರ್ಗಮಿಸಬೇಕಾಯಿತು ಎಂದು ವರದಿಯಾಗಿದೆ.








