ನವದೆಹಲಿ: ವಿಮಾನ ಪ್ರಯಾಣಿಕರ ಹಿತದೃಷ್ಟಿಯಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಏಪ್ರಿಲ್ 20ರಿಂದ ಜಾರಿಗೆ ಬರುವಂತೆ, ಎಲ್ಲಾ ವಿಮಾನಯಾನ ಸಂಸ್ಥೆಗಳು ಒಟ್ಟು ಸೀಟುಗಳ ಪೈಕಿ ಶೇಕಡಾ 60ರಷ್ಟು ಸೀಟುಗಳನ್ನು ಉಚಿತವಾಗಿ ಹಂಚಿಕೆ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಈವರೆಗೆ ವಿಮಾನಯಾನ ಸಂಸ್ಥೆಗಳು ಬಹುತೇಕ ಎಲ್ಲಾ ಸೀಟುಗಳ ಆಯ್ಕೆಗೆ ‘ವೆಬ್ ಚೆಕ್-ಇನ್’ ಸಮಯದಲ್ಲಿ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದ್ದವು. ಡಿಜಿಸಿಎ ಹೊಸ ನಿಯಮದಿಂದಾಗಿ ಇನ್ನು ಮುಂದೆ ಪ್ರಯಾಣಿಕರಿಗೆ ಹೆಚ್ಚಿನ ಸೀಟುಗಳು ಉಚಿತವಾಗಿ ಲಭ್ಯವಾಗಲಿವೆ.
ಈ ಹೊಸ ನಿಯಮವು ಏಪ್ರಿಲ್ 20, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.ಈ ನಿರ್ಧಾರದಿಂದಾಗಿ ಸಾಮಾನ್ಯ ಪ್ರಯಾಣಿಕರ ಮೇಲೆ ಬೀಳುತ್ತಿದ್ದ ಸೀಟ್ ಸೆಲೆಕ್ಷನ್ ಶುಲ್ಕದ ಹೊರೆ ಗಣನೀಯವಾಗಿ ತಗ್ಗಲಿದೆ.ಭಾರತದ ಒಳಗಿನ ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ.
ಉಳಿದ ಶೇ. 40ರಷ್ಟು ಸೀಟುಗಳಿಗೆ (ಹೆಚ್ಚಿನ ಲೆಗ್‌ರೂಮ್ ಇರುವ ಸೀಟುಗಳು ಇತ್ಯಾದಿ) ವಿಮಾನಯಾನ ಸಂಸ್ಥೆಗಳು ಮೊದಲಿನಂತೆ ಶುಲ್ಕ ವಿಧಿಸುವ ಅವಕಾಶವನ್ನು ಹೊಂದಿರುತ್ತವೆ.








