ಮನಾಮ: ಪಶ್ಚಿಮ ಏಷ್ಯಾದಲ್ಲಿ (West Asia) ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಇರಾನ್ನಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ಭಾನುವಾರ ಮುಂಜಾನೆ ಇಸ್ರೇಲ್, ಕುವೈತ್ ಮತ್ತು ಬಹ್ರೇನ್ ದೇಶಾದ್ಯಂತ ಏರ್ ರೈಡ್ (ವೈಮಾನಿಕ ದಾಳಿ) ಸೈರನ್ಗಳು ಮೊಳಗಿವೆ.
ಸಂಭವನೀಯ ದಾಳಿಯಿಂದ ರಕ್ಷಿಸಿಕೊಳ್ಳಲು ಆಯಾ ದೇಶಗಳ ಸರ್ಕಾರಗಳು ತಮ್ಮ ನಾಗರಿಕರಿಗೆ ಕೂಡಲೇ ಸುರಕ್ಷಿತ ಸ್ಥಳಗಳಿಗೆ ಅಥವಾ ಬಂಕರ್ಗಳಿಗೆ ತೆರಳುವಂತೆ ತುರ್ತು ಸೂಚನೆ ನೀಡಿವೆ.
ಬಹ್ರೇನ್ ಆಂತರಿಕ ಸಚಿವಾಲಯವು ಎಕ್ಸ್ (X) ಮೂಲಕ ನಾಗರಿಕರಿಗೆ ಸಂದೇಶ ರವಾನಿಸಿದ್ದು, “ಸೈರನ್ ಮೊಳಗಿಸಲಾಗಿದೆ, ಎಲ್ಲರೂ ಶಾಂತರಾಗಿರಿ ಮತ್ತು ಹತ್ತಿರದ ಸುರಕ್ಷಿತ ಸ್ಥಳಗಳಿಗೆ ಧಾವಿಸಿ” ಎಂದು ತಿಳಿಸಿದೆ.
ಶತ್ರುಗಳ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಲು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಜ್ಜುಗೊಳಿಸಿರುವುದಾಗಿ ಕುವೈತ್ ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಇರಾನ್ ಉಡಾಯಿಸಿರುವ ಕ್ಷಿಪಣಿಗಳನ್ನು ತಡೆಯಲು (Intercept) ಇಸ್ರೇಲ್ ರಕ್ಷಣಾ ಪಡೆ (IDF) ಕಾರ್ಯಾಚರಣೆ ನಡೆಸುತ್ತಿದೆ. ನಾಗರಿಕರ ಮೊಬೈಲ್ಗಳಿಗೆ ತುರ್ತು ಸಂದೇಶಗಳನ್ನು ಕಳುಹಿಸಿ ಜಾಗರೂಕರಾಗಿರಲು ಸೂಚಿಸಲಾಗಿದೆ.ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬಹ್ರೇನ್ ಮತ್ತು ಯುಎಇನಲ್ಲಿರುವ ಅಲ್ಯೂಮಿನಿಯಂ ಕಾರ್ಖಾನೆಗಳಂತಹ ಪ್ರಮುಖ ಕೈಗಾರಿಕಾ ಘಟಕಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ವರದಿಯಾಗಿದೆ.








