ಜೈಪುರ: ಭಾರತೀಯ ವಾಯುಪಡೆಯ (IAF) ಅತ್ಯಂತ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ವಾಯುಪಡೆಯ ನಾಗರಿಕ ಸಿಬ್ಬಂದಿಯೊಬ್ಬನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ಚಾಬುವಾ ವಾಯುಪಡೆ ನಿಲ್ದಾಣದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಆಗಿ ಕೆಲಸ ಮಾಡುತ್ತಿದ್ದ ಸುಮಿತ್ ಕುಮಾರ್ (36) ಬಂಧಿತ ಆರೋಪಿ.
ಈ ಬಂಧನದ ಮೂಲಕ ದೇಶದ ರಕ್ಷಣಾ ವ್ಯವಸ್ಥೆಯ ಮೇಲೆ ಕಣ್ಣಿಟ್ಟಿದ್ದ ಪಾಕಿಸ್ತಾನ ಪ್ರೇರಿತ ದೊಡ್ಡ ಮಟ್ಟದ ಜಾಲವನ್ನು ಭೇದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ ಮೂಲದ ಸುಮಿತ್ ಕುಮಾರ್, 2023 ರಿಂದ ಪಾಕಿಸ್ತಾನದ ಗುಪ್ತಚರ ಏಜೆಂಟ್ಗಳೊಂದಿಗೆ ಸಂಪರ್ಕದಲ್ಲಿದ್ದನು. ರಹಸ್ಯ ಮಾಹಿತಿಯನ್ನು ನೀಡಲು ಈತ ಅವರಿಂದ ಹಣ ಪಡೆಯುತ್ತಿದ್ದ ಎನ್ನಲಾಗಿದೆ.
ಆರೋಪಿಯು ಚಾಬುವಾ ಮತ್ತು ಬಿಕಾನೇರ್ನ ನಾಲ್ (Nal) ವಾಯುಪಡೆ ನಿಲ್ದಾಣಗಳಿಗೆ ಸಂಬಂಧಿಸಿದ ಯುದ್ಧ ವಿಮಾನಗಳ ಸ್ಥಳ, ಕ್ಷಿಪಣಿ ವ್ಯವಸ್ಥೆಗಳ ನಿಯೋಜನೆ ಮತ್ತು ಹಿರಿಯ ಅಧಿಕಾರಿಗಳ ವೈಯಕ್ತಿಕ ವಿವರಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಶತ್ರು ರಾಷ್ಟ್ರಕ್ಕೆ ರವಾನಿಸಿದ್ದಾನೆ.
ಪ್ರಾಥಮಿಕ ತನಿಖೆಯ ಪ್ರಕಾರ, ಪಾಕಿಸ್ತಾನದ ಹ್ಯಾಂಡ್ಲರ್ಗಳು ಈತನ ಹೆಸರಿನಲ್ಲೇ ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆದು ಸಂಪರ್ಕ ಸಾಧಿಸಿದ್ದರು. ಈ ಜಾಲದ ಹಿಂದೆ ಹನಿ ಟ್ರ್ಯಾಪ್ ಅಥವಾ ಹಣದ ಆಮಿಷದ ಸಾಧ್ಯತೆಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಜಂಟಿ ಕಾರ್ಯಾಚರಣೆ: ಜನವರಿ 2026 ರಲ್ಲಿ ಜೈಸಲ್ಮೇರ್ನಲ್ಲಿ ಬಂಧಿಸಲಾಗಿದ್ದ ಮತ್ತೊಬ್ಬ ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ, ರಾಜಸ್ಥಾನ ಮತ್ತು ವಾಯುಪಡೆ ಗುಪ್ತಚರ ಇಲಾಖೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಸುಮಿತ್ನನ್ನು ಅಸ್ಸಾಂನಲ್ಲಿ ವಶಕ್ಕೆ ಪಡೆದು ಜೈಪುರಕ್ಕೆ ಕರೆತಂದಿವೆ.








