ಮಂಡ್ಯ : ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.
ಅಗರಲಿಂಗನದೊಡ್ಡಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಸೋಮವಾರ ಆಗಮಿಸಿ ಕಾಮಗಾರಿ ವಿಳಂಬಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಪಡೆದು ಬಳಿಕ ಮಾತನಾಡಿದರು.
ಶಾಲಾ ಕಟ್ಟಡದ ಕಾಮಗಾರಿಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಿ ವಿಧ್ಯಾರ್ಥಿಗಳ ಅನುಕೂಲಕ್ಕೆ ಅನುವು ಮಾಡಿಕೊಡಬೇಕೆಂದು ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದ್ದರು ಸಹ ಗುತ್ತಿಗೆದಾರರು ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಗ್ಗೆ ಸ್ಥಳದಲ್ಲಿದ್ದ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಟ್ಟಡ ಕಾಮಗಾರಿಗೆ ಜ.31 ರಂದು ಭೂಮಿ ಪೂಜೆ ಮಾಡಲಾಗಿತ್ತು. ಜು. 31 ರೊಳಗೆ ಕಾಮಗಾರಿ ಮುಗಿಸಿ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ವಿಳಂಬವಾಗುತ್ತಿದೆ ಎಂದು ಸಿಡಿಮಿಡಿಗೊಂಡರು.
ಈ ಸಂಬಂಧವಾಗಿ ಉಚ್ಚ ನ್ಯಾಯಾಲಯ ವಿಳಂಬಕ್ಕೆ ಕಾರಣಗಳೇನು ಎಂಬುವುದರ ಬಗ್ಗೆ ಜಿಲ್ಲಾಡಳಿತಕ್ಕೆ ನೋಟೀಸ್ ಜಾರಿ ಮಾಡಿದ್ದು, ಸೆ.14 ರಂದು ಮತ್ತೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಆ.7 ರಂದು ಕಟ್ಟಡ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಕಟ್ಟಾಜ್ಞೆ ಮಾಡಿದರು.
ಇನ್ನು ಶಾಲಾ ಕಟ್ಟಡ ಉದ್ಘಾಟನೆಗೊಂಡ ಎರಡು ತಿಂಗಳೊಳಗೆ ಕಾಂಪೌಂಡ್, ರಸ್ತೆ ಹಾಗೂ ಆಟದ ಮೈದಾನವನ್ನು ನರೇಗಾ ಯೋಜನೆಯಡಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಶಾಸಕ ಕೆ.ಎಂ.ಉದಯ್, ಜಿ.ಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಇಓ ರಾಮಲಿಂಗಯ್ಯ, ಬಿಇಓ ಕಾಳೀರಯ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ದಿವ್ಯಾ, ಸಹಾಯಕ ನಿರ್ದೇಶಕ (ನರೇಗಾ) ಮಂಜುನಾಥ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂತೋಷ್, ಗ್ರಾ.ಪಂ ಸದಸ್ಯರಾದ ಶಂಕರ್, ಹನುಮೇಗೌಡ, ಸುಜಾತ ಮುಖಂಡರಾದ ಮಹೇಶ್, ಪುಟ್ಟಪ್ಪ, ಬೋಮ್ಮಯ್ಯ, ತಿಮ್ಮಪ್ಪ, ಸತೀಶ್ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING : ನಟ ದರ್ಶನ್ ಗೆ ಸದ್ಯಕ್ಕಿಲ್ಲ ರಿಲೀಫ್ : 3 ದಿನ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶ