ಕೊಪ್ಪಳ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ‘ಲವ್ ಜಿಹಾದ್’ ಪ್ರಕರಣಗಳ ಸರಣಿ ಮುಂದುವರಿದಿದ್ದು, ಹುಬ್ಬಳ್ಳಿಯ ಘಟನೆಗಳ ಬೆನ್ನಲ್ಲೇ ಇದೀಗ ಕೊಪ್ಪಳ ಜಿಲ್ಲೆಯಲ್ಲೂ ಇಂತಹುದೇ ಒಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ನಂಬಿಸಿ, ಆಕೆಯ ಅಶ್ಲೀಲ ಚಿತ್ರಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಪ್ಪಳದ ಘಟನೆಯ ವಿವರ:
ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಾಫ್ ಎಂಬ ಯುವಕ ಕುಷ್ಟಗಿ ತಾಲೂಕಿನ ಗ್ರಾಮವೊಂದರ ಹಿಂದೂ ವಿದ್ಯಾರ್ಥಿನಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿದ್ದಾನೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯ ಜೊತೆಗಿದ್ದ ಸಂದರ್ಭದಲ್ಲಿ ಕೆಲವು ಹಿಂದೂ ಯುವಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಮುಸ್ತಾಫ್ನ ಮೊಬೈಲ್ ಪರಿಶೀಲಿಸಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ, ಮೊಬೈಲ್ನಲ್ಲಿ ಹಿಂದೂ ಯುವತಿಯರ ನಗ್ನ ಫೋಟೋ ಮತ್ತು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಈ ಚಿತ್ರಗಳನ್ನು ಇಟ್ಟುಕೊಂಡು ಯುವತಿಯರಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಆರೋಪಿಯು ಜೂಜಾಟ ಮತ್ತು ಮಟ್ಕಾ ದಂಧೆಯಲ್ಲೂ ತೊಡಗಿದ್ದ ಎನ್ನಲಾಗಿದೆ.
ಹಿಂದೂ ಸಂಘಟನೆಗಳ ಆಕ್ರೋಶ:
ಈ ಸರಣಿ ಘಟನೆಗಳಿಂದ ಆಕ್ರೋಶಗೊಂಡ ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಮನವಿ ಸಲ್ಲಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಹೆಚ್ಚುತ್ತಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೂರು ಸ್ವೀಕರಿಸಿರುವ ಎಸ್ಪಿ ಡಾ. ರಾಮ ಅರಸಿದ್ದಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.








