ಮಂಡ್ಯ : ಜೀವನದಲ್ಲಿ ಛಲ, ಶಿಸ್ತು ಮತ್ತು ಸಂಯಮ ಮೈಗೂಡಿಸಿಕೊಂಡ ವ್ಯಕ್ತಿ ಮಾತ್ರ ಮೇರು ಸಾಧನೆ ಮಾಡಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಶ್ರೀ ವಿವೇಕಾನಂದ ಶಾಲೆಯಲ್ಲಿ ಸೋಮವಾರ ನಡೆದ 2026 ನೇ ಸಾಲಿನ ವಿವೇಕ ಸಂಭ್ರಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ವಹಿಸಿ ಅವರು ಮಾತನಾಡಿದರು.
ವಿದ್ಯೆ ಯಾರು ಕದಿಯಲಾಗದ ಆಸ್ತಿ ಹಾಗೂ ವಿದ್ಯೆಗೆ ಯಾವುದು ಸರಿಸಾಟಿಯಿಲ್ಲ ಎಂಬುವುದನ್ನು ತಿಳಿದು ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಉನ್ನತ ಸ್ಥಾನಗಳಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಶೋಭಾ ನಾಗೇಗೌಡ ದಂಪತಿ ಶಿಕ್ಷಣ ಸಂಸ್ಥೆ ಆರಂಭಿಸಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದರು.
ನನಗೆ ಪೋಲಿಯೊದಿಂದಾಗಿ ಬಾಲ್ಯದಲ್ಲೇ ಕೈ-ಕಾಲುಗಳನ್ನು ಕಳೆದುಕೊಂಡರೂ, ಅಚಲ ಆತ್ಮವಿಶ್ವಾಸ ಹಾಗೂ ನಿಮ್ಮೆಲ್ಲರ ಸಹಕಾರದಿಂದ 2024ರ ಸಾಲಿನಲ್ಲಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿದೆ. ಇದಕ್ಕೆ ನನ್ನೋಳಗಿನ ಛಲ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಿರುವುದಕ್ಕೆ ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು ಎಂದರು.
ಪಾಲಕರು ಶಾಲೆಗೆ ಮಕ್ಕಳನ್ನು ಸೇರಿಸಿದರೇ ನಮ್ಮದೇನು ಜವಾಬ್ದಾರಿಯಿಲ್ಲ ಎಂದುಕೊಳ್ಳಬಾರದು. ಮಕ್ಕಳಿಗೆ ದೇಶದ ಮಹಾನ್ ಸಾಧಕರ ಬಗ್ಗೆ ಹೆಚ್ಚು ಪರಿಚಯಿಸಿದಾಗ ಮಾತ್ರ ಅವರು ಕೂಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಂಗವಿಕಲ ಮಕ್ಕಳು ಶಾಪವಲ್ಲ. ದೇವರೆಂದು ಭಾವಿಸಬೇಕು. ಅವರಲ್ಲಿಯೂ ಅಗಾಧವಾದ ಪ್ರತಿಭೆ ಇರುತ್ತೆ ಅದನ್ನು ಅನಾವರಣ ಮಾಡಿದಾಗ ಮಾತ್ರ ಅವರು ಸಹ ದೇಶದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಮಾತನಾಡಿ, ಏಳು ತಿಂಗಳ ಮಗುವಾಗಿದ್ದಾಗಲೇ ತನ್ನ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡ ಕೆ.ಎಸ್.ರಾಜಣ್ಣ ಅವರನ್ನು ಇಂದು ಜಗತ್ತೇ ಗುರುತಿಸಿದೆ. ಪದ್ಮಶ್ರೀ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆ.ಎಸ್. ರಾಜಣ್ಣ ಅವರನ್ನು ಅಭಿನಂದಿಸಿ, ನೀವು ನನ್ನ ದೇಶದ ಹೆಮ್ಮೆ ಎಂದು ಹೇಳಿರುವುದು ಅವರ ಸಾಧನೆಗಳಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು.
ಸಂಸ್ಥೆಯ ಅಧ್ಯಕ್ಷ ಸಿ.ನಾಗೇಗೌಡ, ಕಾರ್ಯದರ್ಶಿ ಎ.ಆರ್.ಶೋಭಾ, ಆರಕ್ಷಕ ಉಪ ನಿರೀಕ್ಷಕ ಶ್ರವಣ್ ಎಸ್.ದಾಸರೆಡ್ಡಿ ಇತರರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








