ಬಳ್ಳಾರಿ: ರಾಜ್ಯದಲ್ಲೊಂದು ಧಾರುಣ ಘಟನೆ ಎನ್ನುವಂತೆ ಕೃಷಿ ಹೊಂಡದಲ್ಲಿ ಮುಳುಗಿ ಅಕ್ಕ, ತಮ್ಮರಿಬ್ಬರು ದುರ್ಮರಣ ಹೊಂದಿರುವಂತ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದಂತ ತಮ್ಮನನ್ನು ಉಳಿಸಲು ಹೋಗಿ, ಅಕ್ಕನೂ ಮುಳುಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬಳ್ಳಾರಿಯ ಮೈಲಾಪುರದಲ್ಲಿ ರೈತ ಮೂಕಣ್ಣನವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಮಕ್ಕಳಾದಂತ ಮಹಾಂಕಾಳಿ(12) ಹಾಗೂ ಶಿವರಾಜ್(9) ತಂದೆಯ ಬಳಿಗೆ ತೆರಳಿದ್ದರು. ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೇ, ಮಕ್ಕಳು ಆಟ ಆಡುತ್ತಿದ್ದರು.
ಕೃಷಿ ಹೊಂಡದ ಬಳಿಯಲ್ಲಿ ಆಟ ಆಡುತ್ತಿದ್ದಂತ ಸಂದರ್ಭದಲ್ಲಿ ತಮ್ಮ ಶಿವರಾಜ್(9) ಕಾಲು ಜಾರಿ ಬಿದ್ದಿದ್ದಾನೆ. ಆತನನ್ನು ರಕ್ಷಣೆ ಮಾಡೋದಕ್ಕೆ ಅಕ್ಕ ಮಹಾಂಕಾಳಿ(12) ಧಾವಿಸಿದ್ದಾರೆ. ಆದರೇ ಅದು ಸಾಧ್ಯವಾಗದೇ ಅಕ್ಕ-ತಮ್ಮ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಬಳ್ಳಾರಿಯ ಸಿರಗುಪ್ಪದ ತೆಕ್ಕಲಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.