ಶಿವಮೊಗ್ಗ: ಮನುಷ್ಯನಿಗೆ ಶತೃ ದುರಾಸೆ. ಮನುಷ್ಯ ದುರಾಸೆಯಿಂದ ತನ್ನತನ ಕಳೆದುಕೊಳ್ಳುತ್ತಿದ್ದಾನೆ. ಆ ಮೂಲಕ ಭ್ರಷ್ಟಾಚಾರದಂತಹ ಜಾಲದಲ್ಲಿ ಸಿಲುಕುತ್ತಿದ್ದಾನೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಎಂ.ಎಲ್.ಹಳ್ಳಿಯಲ್ಲಿ ಭಾನುವಾರ ರಾಮಕೃಷ್ಣ ವಿವೇಕಾನಂದ ವಸತಿ ವಿದ್ಯಾಲಯ, ರಾಮಕೃಷ್ಣ ಸಮೂಹ ಸಂಸ್ಥೆ ಹಾಗೂ ಯುವ ಸ್ಪೂರ್ತಿ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾರಿಗೆ ಹಣ, ಅಧಿಕಾರ, ಸಂಪತ್ತು ಗಳಿಸುವ ಹಪಹಪಿ ಇರುತ್ತದೆಯೋ ಅಂತಹವರಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಡ್ಡದಾರಿಯಿಂದ ಹಣ ಮಾಡುವುದು ದೊಡ್ಡ ಅಪಾಯ. ಇದ್ದದ್ದರಲ್ಲಿಯೆ ಸಂತೋಷ ಪಡುವ, ಅಲ್ಪಸ್ವಲ್ಪ ದಾನ ಮಾಡಿ ತೃಪ್ತಿಪಡುವ, ಮಾನವೀಯ ಮೌಲ್ಯವನ್ನು ಬಿತ್ತುವ ಕೆಲಸವಾಗಬೇಕು. ನಾನು ಲೋಕಾಯುಕ್ತಕ್ಕೆ ಬರುವ ಮೊದಲು ಎಲ್ಲವೂ, ಎಲ್ಲರೂ ಒಳ್ಳೆಯವರು ಎಂದು ಕೊಂಡಿದ್ದೆ. ಆದರೆ ಲೋಕಾಯುಕ್ತಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಅನಾವರಣವಾಗುತ್ತಾ ಹೋಯಿತು ಎಂದರು.
ಹಿಂದೆ ನಾವು ಓದುವ ಪಾಠಗಳಲ್ಲಿ ನೀತಿ ಶಿಕ್ಷಣ ಇತ್ತು. ಆದರೆ ಈಗ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುತ್ತಿಲ್ಲ. ಒಳ್ಳೆಯ ಕೆಲಸ ಮಾಡಿದಾಗ ಸನ್ಮಾನ, ಕೆಟ್ಟ ಕೆಲಸ ಮಾಡಿದಾಗ ಶಿಕ್ಷೆ ಇತ್ತು. ಈಗ ಶ್ರೀಮಂತಿಕೆ, ಅಧಿಕಾರ ಬೇಕು ಎನ್ನುವ ಹಂಬಲ ವಿಜೃಂಭಿಸಿ ಒಳ್ಳೆಯತನ ದೂರವಾಗುತ್ತಿದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕೆ ಈಗಿನಿಂದಲೇ ಸಂಕಲ್ಪ ಕೈಗೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರ ಸೇವೆಗೈದ ಯೋಧರನ್ನು ಸನ್ಮಾನಿಸಿ ಮಾತನಾಡಿದ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಭ್ರಷ್ಟಾಚಾರ ಸಮಾಜಕ್ಕೆ ಶಾಪವಾಗಿದೆ. ಲೋಕಾಯುಕ್ತ ಸಂತೋಷ್ ಹೆಗಡೆ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟರ ಹೆಡೆಮುರಿ ಕಟ್ಟುವ ಕೆಲಸ ಮಾಡಿದ್ದರು. ಆ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಎಲ್ಲಿಯವರೆಗೆ ನಗದು ವ್ಯವಹಾರ ಇರುತ್ತದೆಯೋ ಅಲ್ಲಿಯವರೆಗೆ ಭ್ರಷ್ಟಾಚಾರ ನಿಯಂತ್ರಣ ಕಷ್ಟಸಾಧ್ಯ, ಈ ಹಿನ್ನೆಲೆಯಲ್ಲಿ ಸರ್ಕಾರಗಳು ಆನ್‌ಲೈನ್ ಮೂಲಕ ಹಣಕಾಸು ವಹಿವಾಟಿನ ಕಡೆ ಗಮನ ಹರಿಸಬೇಕು ಎಂದರು.
ರಾಮಕೃಷ್ಣ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ.ಎಂ.ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಿ.ಬಿ.ಸುಂದರೇಶ್, ಮಹಾಬಲೇಶ್ವರ ಎಸ್.ಎನ್., ಕೆ.ಷಣ್ಮುಖಪ್ಪ, ಕೆ.ವೀರೇಶ್, ಚಂದ್ರಶೇಖರ್, ಸತೀಶ್ ನಾಯ್ಕ್, ರಂಗನಾಥ್, ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.
ಚಿರಂತ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸರಿತಾ ದೇವರಾಜ್ ಸ್ವಾಗತಿಸಿದರು. ಮನ್ಸೂರ್ ಶರೀಫ್ ಸನ್ಮಾನ ಪತ್ರ ವಾಚಿಸಿದರು. ಹುಚ್ಚಪ್ಪ ವಂದಿಸಿದರು.
ಸಾಲ ವಸೂಲಾತಿ ಹೆಸರಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳ ತಕ್ಷಣ ನಿಲ್ಲಿಸಬೇಕು: ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ