ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ 150 ಕೋಟಿ ರೂ. ನಷ್ಟವಾಗಿದೆ. ಲೋಕೋಪಯೋಗಿ ಇಲಾಖೆ 75 ಕೋಟಿ ರೂ. ಜಿಲ್ಲಾ ಪಂಚಾಯತ್ 33 ಕೋಟಿ ರೂ., ಸಣ್ಣ ನೀರಾವರಿ 170 ಕೋಟಿ ರೂ. ನಷ್ಟವಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ಸುಮಾರು 33 ಕೋಟಿ ರೂ. ನಷ್ಟವಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ನಷ್ಟದ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುತ್ತದೆ ಅಧಿಕಾರಿಗಳು ಈಗಾಗಲೇ ಎಲ್ಲಾ ವರದಿಗಳನ್ನು ಸಂಗ್ರಹಿಸುತ್ತಿದ್ದಾರೆ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಬಿ.ಎಚ್.ರಸ್ತೆಯಲ್ಲಿ ಬುಧವಾರ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗುoಡಿ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬರಲಿರುವ ಸದನದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಕುರಿತು ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಹೆಚ್ಚಿನ ಅನುದಾನವನ್ನು ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ಕ್ಷೇತ್ರಕ್ಕೆ ನೀಡಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದರು.
ಸಾಗರ ಪಟ್ಟಣದ ಶಿವಪ್ಪನಾಯಕ ವೃತ್ತದಿಂದ ಸಿಗಂದೂರು ತುಮರಿ ಮೂಲಕ ಮರಕುಟಕ ಸೇರುವ ರಾಷ್ಟ್ರೀಯ ಹೆದ್ದಾರಿ 369ಇ ಸರ್ವೇ ಕಾರ್ಯ ಮುಗಿದಿದ್ದು ಕಾಮಗಾರಿ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ರಸ್ತೆ ನಿರ್ಮಾಣದ ಕುರಿತು ಸಣ್ಣಪುಟ್ಟ ಸಮಸ್ಯೆಗಳಿವೆ. ತುಮರಿ ಗ್ರಾಮದೊಳಗಿನಿಂದ ರಸ್ತೆ ಹೋಗಬೇಕು ಎಂದು ಕೆಲವರು ಹೇಳುತ್ತಿದ್ದರೇ, ಇನ್ನು ಕೆಲವರು ಬೈಪಾಸ್ ನಿರ್ಮಿಸಿ ಎನ್ನುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ರಾಷ್ಟ್ರೀಯ ಹೆದ್ದಾರಿ 206 ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಮಗಾರಿ ಮುಗಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ಮಲೆನಾಡಿನಲ್ಲಿ ವಿಪರೀತ ಮಳೆಯಿಂದ ಅಡಿಕೆ ತೋಟಗಳಿಗೆ ಕೊಳೆರೋಗ, ಎಲೆಚುಕ್ಕೆ ರೋಗ ಬಂದಿದೆ. ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವುದು, ಅತಿವೃಷ್ಟಿಯಿಂದ ಭತ್ತ, ಜೋಳ, ಕಲ್ಲಂಗಡಿ ಇನ್ನಿತರೆ ಬೆಳೆಗಳು ಹಾಳಾಗಿದೆ. ಅವರಿಗೂ ಸಹ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟೋ ಕಡೆಗಳಲ್ಲಿ ಅಡಿಕೆ ತೋಟಗಳೇ ನಾಶವಾಗಿದೆ ಸರ್ಕಾರಕ್ಕೆ ಹೆಚ್ಚಿನ ಅನುದಾನವನ್ನು ನೀಡಲು ಕೋರುತ್ತೇವೆ ಎಂದರು.
ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ 234 ಕಾಲುಸಂಕ ನಿರ್ಮಿಸಲು ಹಣ ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿ ಅನುಷ್ಟಾನಕ್ಕೆ ಗಮನ ಹರಿಸುತ್ತೇವೆ. ವಿಪರೀತ ಮಳೆ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಯ ಹೊಂಡಗುoಡಿ ಮುಚ್ಚಲು ಆಗಿರಲಿಲ್ಲ. ಮಳೆ ಕಡಿಮೆಯಾಗಿದ್ದು ತಕ್ಷಣ ಹೊಂಡಗುoಡಿ ಮುಚ್ಚಲು ಅಧಿಕಾರಿಗಳಿಗೆ ಸೂಚಿಸಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಕಾಲುಸಂಕ ನಿರ್ಮಾಣಕ್ಕೆ 50 ಕೋಟಿ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ. ಹಾಗೂ ಪ್ರಗತಿಪಥ ಯೋಜನೆಯಡಿ 20 ಕೋಟಿ ರೂ. ಮಂಜೂರಾಗಿದೆ. ಸುಮಾರು 120 ಕೋಟಿ ರೂ. ನಮ್ಮ ಬಳಿ ಇದ್ದು, ಅಗತ್ಯ ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತೇವೆ. ಇದರ ಜೊತೆಗೆ ಲೋಕೋಪಯೋಗಿ ಇಲಾಖೆಯಿಂದಲೂ ಪ್ರತ್ಯೇಕ ಹಣ ಬರುತ್ತದೆ. ಅಭಿವೃದ್ದಿಗೆ ಹಣ ಇಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.
ಸಾಗರ ನಗರಸಭಾ ಸದಸ್ಯರ ಅಧ್ಯಯನ ಪ್ರವಾಸದ ಬಗ್ಗೆ ಶಾಸಕರು ಹೇಳಿದ್ದೇನು ಗೊತ್ತಾ?
ನಗರಸಭೆ ಸದಸ್ಯರು ದೆಹಲಿ ಮತ್ತು ರ‍್ಯಾಣ ರಾಜ್ಯಗಳಿಗೆ ಪ್ರವಾಸ ಹೋಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದ್ದು, ಸಾರ್ವಜನಿಕವಾಗಿ 40 ಲಕ್ಷ ರೂ. ಖರ್ಚು ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರವಾಸ ಹೋಗುವುದು ಬಿಡುವುದು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಬಿಟ್ಟಿದ್ದು, ಪ್ರವಾಸ ಹೋಗಿ, ಹೋಗಬೇಡಿ ಎಂದು ನಾನು ಹೇಳುವುದಿಲ್ಲ ಅದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು.
ಈ ವೇಳೆ ಸಾಗರ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ರವಿ ಲಿಂಗನಮಕ್ಕಿ, ಕಲಸೆ ಚಂದ್ರಪ್ಪ, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ರಮೇಶ್ ಟಿ.ಪಿ, ಲೋಕೋಪಯೋಗಿ ಇಲಾಖೆಯ ಅನಿಲಕುಮಾರ್, ರಾಷ್ಟಿಯ ಹೆದ್ದಾರಿ ಅಧಿಕಾರಿಗಳು ಹಾಜರಿದ್ದರು.
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!