ಇಂದಿನ ಕಾಲದಲ್ಲಿ ಯುವಜನತೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಸಂಪಾದಿಸುವುದು ದೊಡ್ಡ ವಿಷಯವೇನಲ್ಲ. ಆದರೆ, ಹಳೆಯ ತಲೆಮಾರಿನ ಪೋಷಕರಿಗೆ ಇಂದಿಗೂ ‘ಕೆಲಸ’ ಎಂದರೆ ಬೆಳಿಗ್ಗೆ ಎದ್ದು ತಯಾರಾಗಿ ಕಚೇರಿಗೆ ಹೋಗುವುದು ಎಂದೇ ಅರ್ಥ. ಇದಕ್ಕೆ ಸಾಕ್ಷಿಯೆಂಬಂತೆ 24 ವರ್ಷದ ಯುವಕನೊಬ್ಬ ಎದುರಿಸುತ್ತಿರುವ ವಿಚಿತ್ರ ಸನ್ನಿವೇಶವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಯುವಕ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ರಿಮೋಟ್ ಆಗಿ (ಮನೆಯಿಂದಲೇ ಕೆಲಸ) ಕೆಲಸ ಮಾಡುತ್ತಿದ್ದು, ವಾರ್ಷಿಕವಾಗಿ ಸುಮಾರು 40 ಲಕ್ಷ ರೂಪಾಯಿ ಪ್ಯಾಕೇಜ್ ಪಡೆಯುತ್ತಿದ್ದಾನೆ. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದರೂ ಆತನ ಪೋಷಕರು ಮಾತ್ರ ಸಮಾಧಾನವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಆತ ಕಚೇರಿಗೆ ಹೋಗದೆ ಮನೆಯಲ್ಲೇ ಇರುವುದು. ಮಗ ದಿನವಿಡೀ ಮನೆಯಲ್ಲೇ ಇರುವುದರಿಂದ ಆತನಿಗೆ ನಿಜವಾಗಿಯೂ ಕೆಲಸವಿದೆಯೇ ಅಥವಾ ಕೆಲಸ ಹೋದರೆ ಮುಂದೇನು ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ.
ಸಾಮಾಜಿಕ ಜಾಲತಾಣವಾದ ‘ರೆಡ್ಡಿಟ್’ನಲ್ಲಿ ತನ್ನ ಅಳಲನ್ನು ತೋಡಿಕೊಂಡಿರುವ ಈ ಯುವಕ, ತನ್ನ ಪೋಷಕರು ತನ್ನ ವೃತ್ತಿಜೀವನದ ಬಗ್ಗೆ ಎಷ್ಟು ಆತಂಕಗೊಂಡಿದ್ದಾರೆ ಎಂದರೆ, ಆತನಿಗೆ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಪೋಷಕರ ಪ್ರಕಾರ, ಲಕ್ಷಾಂತರ ರೂಪಾಯಿ ಸಂಬಳ ನೀಡುವ ಖಾಸಗಿ ಅಥವಾ ರಿಮೋಟ್ ಕೆಲಸಗಳಿಗಿಂತ ಕಡಿಮೆ ಸಂಬಳವಿದ್ದರೂ ಸರ್ಕಾರಿ ಕೆಲಸವೇ ಹೆಚ್ಚು ಸುಭದ್ರ ಮತ್ತು ಗೌರವಾನ್ವಿತವಾದುದು.
ಈ ಘಟನೆಯು ಇಂದಿನ ಆಧುನಿಕ ಉದ್ಯೋಗ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪೋಷಕರ ಆಲೋಚನಾ ಕ್ರಮದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಅನೇಕ ನೆಟ್ಟಿಗರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಭಾರತೀಯ ಪೋಷಕರಿಗೆ ‘ಕೆಲಸದ ಭದ್ರತೆ’ ಎಂದರೆ ಇಂದಿಗೂ ಸರ್ಕಾರಿ ಕೆಲಸ ಅಥವಾ ಕಣ್ಣಿಗೆ ಕಾಣುವ ಕಚೇರಿ ಕೆಲಸವೇ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಕೋಟಿ ಸಂಬಳವಿದ್ದರೂ ಲಂಬೋರ್ಗಿನಿ ಖರೀದಿಸುವುದು ಕನಸಿನ ಮಾತು’: ಗೂಗಲ್ ಉದ್ಯೋಗಿಯ ಪೋಸ್ಟ್ ವೈರಲ್!








