ಶಿವಮೊಗ್ಗ: ದಾರಿಯಲ್ಲಿ ಕಳೆದುಕೊಂಡ ವಸ್ತುವನ್ನು ಹುಡುಕೋದೇ ಕಷ್ಟ. ಇನ್ನೂ ಕೆರೆಗೆ ಎಸೆದಿದ್ದಂತ ವಸ್ತುವನ್ನು ಹುಡುಕೋದು ಸಾಧ್ಯವೇ.? ಇಲ್ಲ ಅನ್ನೋದೇ ಅನೇಕರ ಮಾತು. ಆದ್ರೇ ರಾಜ್ಯದಲ್ಲೊಂದು ದೇವರ ಪವಾಡ ಎನ್ನುವಂತೆ 10 ವರ್ಷಗಳ ಹಿಂದೆ ಕೆರೆಗೆ ಎಸೆದಿದ್ದಂತ ಮಾರಮ್ಮನ ಕಲ್ಲನ್ನು ತೆರವಿನಕೊಪ್ಪದ ಅಕ್ಕನಾಗಮ್ಮ ದೇವರು ಹುಡುಕಿಕೊಟ್ಟು ಪವಾಡ ಮೆರೆದಿದ್ದಾಳೆ. ಅದು ಹೇಗೆ.? ಏನು ಕತೆ ಅಂತ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಳಲಗದ್ದೆಯಲ್ಲಿ 10 ವರ್ಷಗಳ ಹಿಂದೆ ಗ್ರಾಮದಲ್ಲಿದ್ದಂತ ದೇವಸ್ಥಾನವನ್ನು ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಗಿತ್ತು. ಗ್ರಾಮದ ಹಳೆಯ ದೇವಸ್ಥಾನ ತೆರವುಗೊಳಿಸಿ, ಹೊಸದಾಗಿ ದೇವಸ್ಥಾನವನ್ನು ನಿರ್ಮಿಸಲಾಗಿತ್ತು. ಈ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪರುಶುರಾಮ ಹಾಗೂ ರೇಣುಕದ ಎಲ್ಲಮ್ಮನನ್ನು ಪ್ರತಿಸ್ಥಾಪಿಸಲಾಗಿತ್ತು.
ದೇವರ ಮೂರ್ತಿಗೆ ಜೀವಕಳೆಯನ್ನು ಭಟ್ರು ತುಂಬಿದ್ದರು. ಆದ್ರೇ ಹೊಸ ದೇವಸ್ಥಾನದಲ್ಲಿದ್ದಂತ ಕಲ್ಲಿನಲ್ಲಿ ಯಾವುದೇ ಶಕ್ತಿಯಿಲ್ಲ. ಅದನ್ನ ತೆಗೆದುಕೊಂಡು ಹೋಗಿ ಯಾವುದಾದರೂ ಕೆರೆಗೆ ಹಾಕಿ ಬನ್ನಿ ಅಂತ ಹೇಳಿದ್ದರು. ಹೀಗಾಗಿ ಮಳಲಗದ್ದೆಯ 8 ಜನರು ಆ ಕಲ್ಲನ್ನು ತೆಗೆದುಕೊಂಡು ಹೋಗಿ ಕೆಳದಿಯ ಕೆರೆಯಲ್ಲಿ ಹಾಕಿ ಬಂದಿದ್ದರು.
ಮಾರಮ್ಮನ ಕಲ್ಲು ಕೆರೆಗೆ ಹಾಕಿ ಬಂದವರಿಗೆ ಶುರುವಾಯ್ತು ಕಾಟ
ಮಳಲಗದ್ದೆಯ ಗ್ರಾಮಸ್ಥರು ಹೇಳಿದಂತೆ ಭಟ್ರು ಹೊಸ ದೇವಸ್ಥಾನದಲ್ಲಿ ಪರಶುರಾಮ, ರೇಣುಕೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಜೀವ ಕಳೆಯನ್ನು ತುಂಬಿದ್ರು. ಆದ್ರೇ ಅಲ್ಲಿ ಮೂಲದಲ್ಲಿ ಇದ್ದದ್ದೇ ಮಾರಮ್ಮ ದೇವಿಯಂತೆ. ಆದ್ರೇ ಹೊಸ ದೇವಸ್ಥಾನ ನಿರ್ಮಿಸಿದಾಗ ಆ ಗುಡಿಯಲ್ಲಿ ಪರಶುರಾಮ ಹಾಗೂ ರೇಣುಕೆಯ ಮೂರ್ತಿಗಳನ್ನು ಸ್ಥಾಪಿಸಿ, ಅಲ್ಲಿಂದ ಇಲ್ಲಿಯವರೆಗೆ ಪೂಜೆ ಮಾಡಿಕೊಂಡು ಬರಲಾಗಿತ್ತು.
ಆದ್ರೇ ಮೂಲ ಗುಡಿಯಲ್ಲಿದ್ದಂತ ಮಾರಮ್ಮನ ಮೂರ್ತಿಯ ಕಲ್ಲು ಕೆಳದಿ ಕೆರೆಯಲ್ಲಿ ಎಸೆದು ಬಂದಿದ್ದೇ, ಹಾಗೆ ಹಾಕಿದಂತ 8 ಮಂದಿಗೆ ಕಾಟ ಶುರುವಾಗಿತ್ತಂತೆ. 8 ಮಂದಿಯಲ್ಲಿ ಒಬ್ಬರು ಬಸ್ ಅಪಘಾತದಲ್ಲಿ ತೀರಿಕೊಂಡ್ರೇ, ಮತ್ತೆ ಇಬ್ಬರು ಹೃದಯಾಘಾತ, ಇನ್ನೂ ಕೆಲವರ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಉಂಟಾಗಿದ್ದವು. ಇದನ್ನು ಅರಿಯದೇ ಮಾರಿ ಕಾಟ ಮಾತ್ರ ದಿನೇ ದಿನೇ ಹೆಚ್ಚಾಗಿತ್ತು.
ತೆರವಿನಕೊಪ್ಪದ ಅಕ್ಕನಾಗಮ್ಮ ತಾಯಿ ಮೊರೆ ಹೋದ ಗ್ರಾಮಸ್ಥರು
ಮಳಲಗದ್ದೆಯಲ್ಲಿ ದಿನೇ ದಿನೇ ಜನರು ವಿವಿಧ ಕಾರಣಗಳಿಂದ ಅನಾರೋಗ್ಯಕ್ಕೆ ಒಳಗಾಗೋದು, ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ಬೆಚ್ಚಿ ಬಿದ್ದಂತ ಜನರು, ಮೊದಲು ಭಟ್ರ ಹತ್ತಿರ ಹೋಗಿ ಕೇಳಿದ್ದಾರೆ. ಅಲ್ಲಿ ಮಾರಮ್ಮನ ದೇವಿಯ ಕಲ್ಲು ತೆಗೆದು ಕೆರೆಗೆ ಹಾಕಿ ಬಂದ ವಿಷಯ ತಿಳಿದಿದೆ. ಮೂಲ ದೇಗುಲದಲ್ಲಿ ಇದ್ದದ್ದೇ ಒಂದು ದೇವರು, ಜೀರ್ಣೋದ್ಧಾರದ ವೇಳೆಯಲ್ಲಿ ಪ್ರತಿಷ್ಠಾಪಿಸಿರೋದೇ ಮತ್ತೊಂದು ದೇವರು ಅನ್ನೋ ವಿಷಯವನ್ನು ಮನವರಿಕೆ ಮಾಡಲಾಗಿದೆ.
ಈ ವಿಷಯ ಅರಿತಂತ ಮಳಲಗದ್ದೆ ಗ್ರಾಮಸ್ಥರು, ತೆರವಿನಕೊಪ್ಪದ ಅಕ್ಕನಾಗಮ್ಮನ ದೇವಸ್ಥಾನಕ್ಕೆ ಹೋಗಿ ಹೇಳಿಕೆ ಪಡೆದಿದ್ದಾರೆ. ಆ ತಾಯಿ ನಿಮ್ಮ ಊರಿನಲ್ಲಿದ್ದಂತ ಮಾರಮ್ಮ ದೇವಿಯನ್ನು ಕೆರೆಗೆ ಎಸೆಯಲಾಗಿದೆ. ಅದನ್ನು ಮರು ಪ್ರತಿಸ್ಠಾಪಿಸಿದಾಗಲೇ ನಾನು ಊರಿಗೆ ಕಾಲಿಡೋದು ಅಂತ ಹೇಳಿದೆ. ಜೊತೆಗೆ ತಪ್ಪು ಕಾಣಿಕೆ ಇಟ್ಟು, ಊರಿನ ಗ್ರಾಮಸ್ಥರು ಕೋರಿದ್ರೇ ಕೆರೆಗೆ ಎಸೆದಿರೋ ಮಾರಮ್ಮನ ಕಲ್ಲು ತೋರಿಸೋದಾಗಿಯೂ ತಿಳಿಸಿದೆ. ಅದಕ್ಕೆ ಮಳಲಗದ್ದೆ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ. ಅಲ್ಲಿ ನುಡಿದಂತ ಹೇಳಿಕೆಯಂತೆ ತಯಾರಿ ಮಾಡಿಕೊಂಡಿದ್ದಾರೆ.
10 ವರ್ಷಗಳ ಹಿಂದೆ ಕೆರೆಗೆ ಎಸೆದ ಮಾರಮ್ಮನ ಕಲ್ಲು ತೋರಿಸಿದ ತೆರೆವಿನಕೊಪ್ಪದ ತಾಯಿ
ಇಂದು ಮಳಲಗದ್ದೆಯ ಗ್ರಾಮಸ್ಥರೆಲ್ಲ ಸೇರಿ, ತೆರವಿನಕೊಪ್ಪದ ಅಕ್ಕನಾಗಮ್ಮನ ಸನ್ನಿಧಿಗೆ ತೆರಳಿದ್ದಾರೆ. ಪೂಜೆ ಮಾಡಿಸಿಕೊಂಡು ಅಕ್ಕನಾಗಮ್ಮನ ಪಲ್ಲಕಿಯನ್ನು ಹೊತ್ತು ಮಾರಿಕಾಂಬ ದೇವಿಯ ಕಲ್ಲಿನ ಮೂರ್ತಿಯನ್ನು ಹುಡುಕೋದಕ್ಕೆ ಕೆಳದಿಯ ಕೆರೆ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ಗಂಗಾಪೂಜೆ ಸೇರಿದಂತೆ ವಿವಿಧ ಸಾಂಪ್ರದಾಯಿದ ಕಾರ್ಯಗಳ ನಂತ್ರ, ಕೆರೆಗೆ ಪಲ್ಲಕ್ಕಿಯೊಂದಿಗೆ ಇಳಿದಂತ ಅಕ್ಕನಾಗಮ್ಮ, 10 ವರ್ಷಗಳ ಹಿಂದೆ ಕೆರೆಗೆ ಎಸೆದಿದ್ದಂತ ಹಳೆಯ ಮಾರಮ್ಮನ ಕಲ್ಲನ್ನು ಕ್ಷಣಾರ್ಧದಲ್ಲಿ ಹುಡುಕಿ ಕೊಟ್ಟು, ಪವಾಡ ಮೆರೆದಿದ್ದಾಳೆ. ಆ ಕಲ್ಲನ್ನು ಕೆರೆಗೆ ಹಾಕಿದಂತ ಮಳಲಗದ್ದೆಯ ಇಬ್ಬರು ಗ್ರಾಮಸ್ಥರು ಕೂಡ ಅದೇ ಕಲ್ಲು ಅಂತ ಗುರುತಿಸಿದ್ದಾರೆ.
ಹಳೆಯ ಮಾರಮ್ಮನ ಕಲ್ಲಿನ ಮೂರ್ತಿಯ ಪ್ರತಿಷ್ಠಾಪನೆ ಹೇಗೆ.?
ಹೊಸ ದೇವಸ್ಥಾನ ನಿರ್ಮಾಣ ಮಾಡಿದ ನಂತ್ರ ಮಳಲಗದ್ದೆಯ ಗ್ರಾಮಸ್ಥರು ಆ ಗುಡಿಯಲ್ಲಿ ಪರಶುರಾಮ, ರೇಣುಕದ ಎಲ್ಲಮ್ಮನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಆದ್ರೇ ಅಲ್ಲಿ ಮೂಲದಲ್ಲಿ ಮಾರಮ್ಮನ ದೇವಿ ಗುಡಿಯಾಗಿತ್ತು. ವಾಸಿಸುತ್ತಿದ್ದಳಂತೆ. ಹೀಗಾಗಿ ಈಗ ಆ ದೇವರನ್ನು ಮತ್ತೊಂದು ದೇವಸ್ಥಾನ ನಿರ್ಮಿಸಿ, ಅಲ್ಲಿ ಪ್ರತಿಷ್ಠಾಪಿಸಿದ ಬಳಿಕ, ಆ ದೇವಾಲಯದಲ್ಲಿ ಮಾರಮ್ಮನ ಕಲ್ಲನ್ನು ಸಾಂಪ್ರದಾಯಿಕವಾಗಿ ಸ್ಥಾಪಿಸೋ ನಿರ್ಧಾರವನ್ನು ಮಳಲಗದ್ದೆ ಗ್ರಾಮಸ್ಥರು ಬಂದಿದ್ದಾರೆ. ಆ ಮೂಲಕ ತಮ್ಮ ಊರಿಗೆ ವಕ್ರ ದೃಷ್ಠಿ ಬೀರಿರೋ ಮಾರಮ್ಮನ ಕೆಂಗಣ್ಣಿನಿಂದ ಪಾರಾಗೋದಕ್ಕೆ ಮುಂದಾಗಿದ್ದಾರೆ.
ಪವರ್ ಪುಲ್ ದೇವರು ತೆರವಿನಕೊಪ್ಪದ ಅಕ್ಕನಾಗಮ್ಮ
ಅಂದಹಾಗೇ ಮಾಸೂರು ಸಮೀಪದಲ್ಲಿರುವಂತ ತೆರವಿನಕೊಪ್ಪದ ಅಕ್ಕನಾಗಮ್ಮನ ಪವಾಡ ಅಷ್ಟಿಷ್ಟಲ್ಲ. ಅಲ್ಲಿಗೆ ನೂರಾರೂ ಭಕ್ತರು ತೆರಳಿ, ಹೇಳಿಕೆ ಪಡೆಯುತ್ತಾರಂತೆ. ಜನರ ಸಮಸ್ಯೆ ನಿವಾರಿಸೋದರಲ್ಲಿ ತಾಯಿ ಎತ್ತಿದ ಕೈ ಅನ್ನೋದು ಭಕ್ತರ ಮಾತು. ಯಾವುದೇ ಸಮಸ್ಯೆ ಅಂತ ಹೇಳಿಕೊಂಡು ಹೋದ್ರೆ ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ.
ವರದಿ: ಅಣ್ಣಪ್ಪ ಕೆಳದಿಪುರ ಜೊತೆ ವಸಂತ ಬಿ ಈಶ್ವರಗೆರೆ
Alamgir Alam: ಮನಿ ಲಾಂಡರಿಂಗ್ ಪ್ರಕರಣದಲ್ಲಿ ED ಅಧಿಕಾರಿಗಳಿಂದ ಜಾರ್ಖಂಡ್ ಸಚಿವ ಆಲಂಗೀರ್ ಆಲಂ ಬಂಧನ
BREAKING : ಅತ್ಯಾಚಾರ ಆರೋಪಿ ‘ಸಂದೀಪ್ ಲಾಮಿಚಾನೆ’ಗೆ ಕ್ಲೀನ್ ಚಿಟ್, ಟಿ20 ವಿಶ್ವಕಪ್’ನಲ್ಲಿ ನೇಪಾಳ ಪರ ಆಡುವ ಸಾಧ್ಯತೆ