ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ನಡುವೆ ನಡೆದ ಗಲಾಟೆಯು ಗೃಹಿಣಿಯೊಬ್ಬರ ಬಲಿ ಪಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಾಡಿದ ಸಾಂಬಾರ್ ಅನ್ನೇ ಪತಿಗೆ ಬಡಿಸಿದ್ದಕ್ಕೆ ನಡೆದ ಜಗಳವು ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಏನಿದು ಘಟನೆ?
ಮೃತರನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಇವರು ರಂಗಸ್ವಾಮಿ ಎಂಬುವವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕಾವ್ಯ ಅವರು ಮೂರು ದಿನಗಳ ಹಿಂದೆ ಸಾಂಬಾರ್ ತಯಾರಿಸಿದ್ದರು. ಅದೇ ಸಾಂಬಾರನ್ನು ಬಿಸಿ ಮಾಡಿ ಕಳೆದ ಮೂರು ದಿನಗಳಿಂದ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಪತಿಗೆ ಬಡಿಸುತ್ತಿದ್ದರು ಎನ್ನಲಾಗಿದೆ.
ವಿಕೋಪಕ್ಕೆ ತಿರುಗಿದ ಜಗಳ
ಗುರುವಾರ ರಾತ್ರಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪತಿ ರಂಗಸ್ವಾಮಿ ಪತ್ನಿಯ ಜೊತೆ ತೀವ್ರ ಜಗಳವಾಡಿದ್ದಾರೆ. ಹಳಸಿದ ಸಾಂಬಾರ್ ನೀಡಿದ್ದಕ್ಕೆ ಆಕ್ರೋಶಗೊಂಡ ಪತಿ, ಕಾವ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಕಾವ್ಯ, ಮನೆಯಲ್ಲಿದ್ದ ಕೃಷಿ ಉದ್ದೇಶದ ಕ್ರಿಮಿನಾಶಕವನ್ನು ಸೇವಿಸಿದ್ದಾರೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು
ಕ್ರಿಮಿನಾಶಕ ಸೇವಿಸಿದ ಕಾವ್ಯ ಅವರು ವಾಂತಿ ಮಾಡಿಕೊಳ್ಳಲಾರಂಭಿಸಿದಾಗ ಗಾಬರಿಗೊಂಡ ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಕಾವ್ಯ ಅವರು ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತನಿಖೆ:
ಕಾವ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ: ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಹೆಚ್ಚಳವಿಲ್ಲ- ಕೇಂದ್ರ ಸರ್ಕಾರ ಸ್ಪಷ್ಟನೆ
ವಿಶ್ವಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿ ರಾಜೀನಾಮೆ ನೀಡಲಿ: ಸಿಎಂ ಸಿದ್ಧರಾಮಯ್ಯ








