ಚಾಮರಾಜನಗರ: ನಟರ ಮೇಲಿನ ಅಭಿಮಾನ ಯಾವ ಮಟ್ಟಕ್ಕೆ ಇರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಮೇಲಿನ ಅತೀವ ಪ್ರೀತಿಯಿಂದ ಅಭಿಮಾನಿಯೊಬ್ಬರು ತಮಿಳುನಾಡಿನಲ್ಲಿ ಅವರಿಗಾಗಿ ಪುಟ್ಟ ಗುಡಿಯೊಂದನ್ನು ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಚಾಮರಾಜನಗರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ದೊಡ್ಡಗಾಜನೂರಿನಲ್ಲಿ ಈ ಅಪರೂಪದ ಅಭಿಮಾನ ಕಂಡುಬಂದಿದೆ. ಇಲ್ಲಿನ ನಿವಾಸಿ ಸಿದ್ದರಾಜು ಎಂಬುವವರು ಕಿಚ್ಚ ಸುದೀಪ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ತಮ್ಮ ಮನೆಯ ಆವರಣದಲ್ಲಿಯೇ ಸುದೀಪ್ ಅವರಿಗಾಗಿ ಒಂದು ಸಣ್ಣ ಗುಡಿಯನ್ನು ನಿರ್ಮಿಸಿದ್ದಾರೆ.
ಈ ಗುಡಿಯಲ್ಲಿ ಮಹರ್ಷಿ ವಾಲ್ಮೀಕಿ, ವೀರ ಮದಕರಿ ನಾಯಕ ಹಾಗೂ ನಟ ಸುದೀಪ್ ಅವರ ಫೋಟೋಗಳನ್ನು ಇಟ್ಟು ಪ್ರತಿದಿನ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತಿದೆ.
‘ಕಿಚ್ಚ ಸಿದ್ದರಾಜು’ ಎಂದೇ ಖ್ಯಾತಿ
28 ವರ್ಷದ ಸಿದ್ದರಾಜು ಅವರು ಐಸ್ ಕ್ಯಾಂಡಿ ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ಸುದೀಪ್ ಅವರ ಮೇಲಿನ ಇವರ ಅಭಿಮಾನವನ್ನು ಕಂಡು ಸ್ಥಳೀಯರು ಇವರನ್ನು ಪ್ರೀತಿಯಿಂದ ‘ಕಿಚ್ಚ ಸಿದ್ದರಾಜು’ ಎಂದೇ ಗುರುತಿಸುತ್ತಾರೆ.








