ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆ ಆಗಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣ ಮಾಡಲಾಗಿರುವ ಸೇತುವೆ ಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.
ಸೇತುವೆಯು 2.44 ಕಿ.ಮೀ. ಉದ್ದವಿದ್ದು, ವಿಜಯಪುರದ ಕೊಲ್ಲಾರ ಬ್ರಿಜ್ (3 ಕಿ.ಮೀ.) ನಂತರ ರಾಜ್ಯದ 2ನೇ ಉದ್ದದ ಸೇತುವೆಯಾಗಿದೆ. ಕೇಬಲ್ ಬ್ರಿಜ್ 740 ಮೀ.ಉದ್ದವಿದ್ದು, ಇದು ರಾಜ್ಯದ ಅತಿ ಉದ್ದದ ಒಳನಾಡ ತೂಗು ಸೇತುವೆ. ದೇಶದಲ್ಲೇ 2ನೆಯದ್ದು ಆಗಿದೆ. ಸೇತುವೆ ನಿರ್ಮಾಣಕ್ಕೆ 473 ಕೋಟಿ ರೂ. ವೆಚ್ಚವಾಗಿದೆ.
ಸಾಗರದಿಂದ ತುಮರಿ ಅಥವಾ ಸಿಗಂದೂರಿಗೆ ತೆರಳಲು ರಸ್ತೆ ಮಾರ್ಗವಾಗಿ 100 ಕಿ.ಮೀ. ಸುತ್ತಿ ಬಳಸಿ ಹೋಗಬೇಕಿತ್ತು. ಇಲ್ಲವೇ ಲಾಂಚ್ನಲ್ಲಿ ತೆರಳಬೇಕಿತ್ತು. ಹೊಸ ಸೇತುವೆಯಿಂದ ಅಂತರ ಅರ್ಧದಷ್ಟು ತಗ್ಗಲಿದೆ. ಶರಾವತಿ ಹಿನ್ನೀರ ಪ್ರದೇಶದ ಜನರ ಬವಣೆ ತಪ್ಪಲಿದೆ.