ಮೈಸೂರು: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ.ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಎದುರಾದ ಹಿನ್ನಡೆ ಹಾಗೂ ಅಡ್ಡ ಮತದಾನ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ.ಅತಿಯಾದ ನಂಬಿಕೆಯೇ ನಮಗೆ ಆಘಾತ ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ನಾಲ್ಕರಿಂದ ಐದು ಜನ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತಮಗೆ ಮೊದಲೇ ನಿರೀಕ್ಷೆಯಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಯಾರ್ಯಾರು ಕ್ರಾಸ್ ವೋಟ್ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಇದರಿಂದ ನಾನೇನು ವಿಚಲಿತನಾಗಿಲ್ಲ ಮತ್ತು ಇದೇನು ನನಗೆ ಅಚ್ಚರಿ ಮೂಡಿಸಿಲ್ಲ ಎಂದಿದ್ದಾರೆ.
ಹೆಚ್.ಡಿ. ದೇವೇಗೌಡರು ಪಕ್ಷದ ನಾಯಕರ ಮೇಲೆ ಇಟ್ಟಿದ್ದ ಅತಿಯಾದ ವಿಶ್ವಾಸ ಮತ್ತು ಆತ್ಮೀಯತೆಯೇ ಇಂದಿನ ಪರಿಸ್ಥಿತಿಗೆ ಕಾರಣ ಎಂದ ಅವರು, ದೊಡ್ಡಗೌಡರ ಗೌರವಕ್ಕೆ ಧಕ್ಕೆ ಬರಬಾರದು ಎಂದು ಹಲವು ಬಾರಿ ಅವರ ತೀರ್ಮಾನಗಳಿಗೆ ತಲೆಬಾಗಿದ್ದಾಗಿ ಹೇಳಿದ್ದಾರೆ.
ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡರ ನಡೆ ಕುರಿತು ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಕುಮಾರಸ್ವಾಮಿ, ಅವರ ಹೆಸರನ್ನು ನನ್ನ ಮುಂದೆ ಎತ್ತಬೇಡಿ, ಕಳೆದ ಒಂದೂವರೆ ವರ್ಷದಿಂದ ನಾನು ಅವರ ಬಗ್ಗೆ ಮಾತನಾಡಿಲ್ಲ, ಅವರ ಬಗ್ಗೆ ಚರ್ಚೆಯೂ ಬೇಡ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಕೇವಲ 14 ಮತಗಳು ಜೆಡಿಎಸ್ ಅಭ್ಯರ್ಥಿಗೆ ಲಭಿಸಿದ್ದು, ಮೈತ್ರಿ ಲೆಕ್ಕಾಚಾರ ಉಲ್ಟಾ ಆಗಿದೆ. ಈ ಹಿನ್ನೆಲೆಯಲ್ಲಿ ಉದ್ಭವಿಸಿರುವ ರಾಜಕೀಯ ಪರಿಸ್ಥಿತಿಯ ಆತ್ಮಾವಲೋಕನಕ್ಕಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರ ತುರ್ತು ಸಭೆಯನ್ನು ಕರೆದಿದ್ದು, ಎಲ್ಲಾ ಶಾಸಕರು ಖುದ್ದಾಗಿ ಹಾಜರಿರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.








