ನವದೆಹಲಿ: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. 2025–26ನೇ ಆರ್ಥಿಕ ಸಾಲಿನ ನೌಕರರ ಭವಿಷ್ಯ ನಿಧಿ (EPF) ಠೇವಣಿಗಳಿಗೆ ಶೇಕಡಾ 8.25ರಷ್ಟು ಬಡ್ಡಿದರವನ್ನು ನೀಡಲು ಕೇಂದ್ರ ಸರ್ಕಾರ ಅಧಿಕೃತ ಒಪ್ಪಿಗೆ ಸೂಚಿಸಿದೆ.
ಇದರೊಂದಿಗೆ, ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ತನ್ನ 7 ಕೋಟಿಗೂ ಅಧಿಕ ಇರುವ ಚಂದಾದಾರರ ಖಾತೆಗಳಿಗೆ ಈ ಬಡ್ಡಿಯ ಮೊತ್ತವನ್ನು ಇದೇ ತಿಂಗಳಿನಲ್ಲೇ ಜಮೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್: ನಿಯಮಾವಳಿಗಳ ಪ್ರಕಾರ, ಇಪಿಎಫ್ಒ ಕೇಂದ್ರೀಯ ಧರ್ಮದರ್ಶಿ ಮಂಡಳಿಯು (CBT) ನಡೆಸಿದ ಸಭೆಯಲ್ಲಿ 2025–26ನೇ ಸಾಲಿಗೆ ಶೇ 8.25ರಷ್ಟು ಬಡ್ಡಿ ಪಾವತಿಸಲು ತೀರ್ಮಾನಿಸಿ, ಅಂತಿಮ ಅನುಮೋದನೆಗಾಗಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ವರದಿಯನ್ನು ಕಳುಹಿಸಿಕೊಟ್ಟಿತ್ತು. ಸದ್ಯ ಈ ಪ್ರಸ್ತಾವನೆಗೆ ಹಣಕಾಸು ಸಚಿವಾಲಯವು ಹಸಿರು ನಿಶಾನೆ ತೋರಿದೆ.
ಇದಕ್ಕೂ ಮುನ್ನ, ಮಾರ್ಚ್ ತಿಂಗಳಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಮಹತ್ವದ ಸಭೆಯಲ್ಲೂ ಸಹ 2025–26ನೇ ಆರ್ಥಿಕ ವರ್ಷಕ್ಕೆ ಶೇ 8.25ರಷ್ಟು ಬಡ್ಡಿದರವನ್ನು ನಿಗದಿಪಡಿಸುವುದಕ್ಕೆ ಒಮ್ಮತದ ಒಪ್ಪಿಗೆ ಸೂಚಿಸಲಾಗಿತ್ತು.
ಸರ್ಕಾರದ ಈ ಕ್ರಮದಿಂದಾಗಿ ಪಿಎಫ್ ಹಣವನ್ನು ನಂಬಿಕೊಂಡಿರುವ ದೇಶದ ಕೋಟ್ಯಂತರ ಸಂಬಳ ಪಡೆಯುವ ನೌಕರರ ಖಾತೆಗಳಿಗೆ ಶೀಘ್ರದಲ್ಲೇ ಹೆಚ್ಚಿನ ಬಡ್ಡಿ ಹಣ ಬಂದು ಸೇರಲಿದೆ.








