ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಆಸ್ಪತ್ರೆಗೆ ಕಾಲಿಟ್ಟರೆ ಸಾಕು ಸಾವಿರಾರು ರೂಪಾಯಿ ಹಾಗೂ ಲಕ್ಷಾಂತರ ರೂಪಾಯಿ ಹಣ ಖರ್ಚಾಗುವ ಪರಿಸ್ಥಿತಿ ಇದೆ. ಹೀಗಾಗಿ ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನರಿಗೆ ಯಾವುದಾದರೂ ಗಂಭೀರ ಕಾಯಿಲೆ ಬಂದರೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಇಂತಹ ಸಮಯದಲ್ಲಿ ಆರ್ಥಿಕ ನಷ್ಟದಿಂದ ಪಾರಾಗಲು ಆರೋಗ್ಯ ವಿಮೆ (Health Insurance) ಅತ್ಯಂತ ಅತ್ಯಗತ್ಯವಾಗಿದೆ.
ಆದರೆ, ನಮಗೆಲ್ಲರಿಗೂ ಸಾಮಾನ್ಯವಾಗಿ ಒಂದು ಅನುಮಾನ ಕಾಡುತ್ತಿರುತ್ತದೆ. ಜ್ವರ, ನೆಗಡಿ, ಶೀತದಂತಹ ಸಣ್ಣಪುಟ್ಟ ಕಾಯಿಲೆಗಳಿಗೆ ಆರೋಗ್ಯ ವಿಮೆ ಅನ್ವಯಿಸುತ್ತದೆಯೇ? ಇದಕ್ಕೆ ಉತ್ತರ ಇಲ್ಲಿದೆ.
ಜ್ವರ, ಶೀತಕ್ಕೆ ಹೆಲ್ತ್ ಇನ್ಶೂರೆನ್ಸ್ ಸಿಗುತ್ತಾ?
ಸಾಮಾನ್ಯವಾಗಿ ಜ್ವರ ಅಥವಾ ಶೀತ ಬಂದಾಗ ಯಾರೂ ಆಸ್ಪತ್ರೆಗೆ ದಾಖಲಾಗುವುದಿಲ್ಲ (Admit ಆಗುವುದಿಲ್ಲ). ಕೇವಲ ವೈದ್ಯರನ್ನು ಭೇಟಿಯಾಗಿ, ಅವರು ಬರೆದುಕೊಟ್ಟ ಮಾತ್ರೆಗಳನ್ನು ಪಡೆದು ಮನೆಗೆ ಮರಳುತ್ತೇವೆ. ಆದರೆ ನೀವು ತೆಗೆದುಕೊಳ್ಳುವ ಸಾಮಾನ್ಯ ಆರೋಗ್ಯ ವಿಮೆಯಲ್ಲಿ (Basic Health Insurance) ಈ ರೀತಿಯ ವೆಚ್ಚಗಳು ಕವರ್ ಆಗುವುದಿಲ್ಲ. ಏಕೆಂದರೆ ಪ್ರಾಥಮಿಕ ವಿಮೆಯು ಕೇವಲ ಆಸ್ಪತ್ರೆಗೆ ದಾಖಲಾದಾಗ (Hospitalization) ಆಗುವ ಖರ್ಚುಗಳನ್ನು ಮಾತ್ರ ಭರಿಸುತ್ತದೆ.
ಆದರೆ, ನೀವು ಜ್ವರ, ಶೀತದಂತಹ ಸಣ್ಣಪುಟ್ಟ ಕಾಯಿಲೆಗಳಿಗೂ ವಿಮೆ ಪಡೆಯಬೇಕೆಂದರೆ, ನಿಮ್ಮ ಪಾಲಿಸಿಯೊಂದಿಗೆ ‘ಒಪಿಡಿ ಕವರೇಜ್’ (OPD Coverage) ಎಂಬ ‘ಆಡ್-ಆನ್’ (Add-on) ಆಯ್ಕೆಯನ್ನು ಆರಿಸಿಕೊಳ್ಳಬೇಕಾಗುತ್ತದೆ.
ಒಪಿಡಿ (OPD) ಎಂದರೇನು?
OPD ಎಂದರೆ ‘ಔಟ್ ಪೇಷಂಟ್ ಡಿಪಾರ್ಟ್ಮೆಂಟ್’ (Out-Patient Department) ಎಂದರ್ಥ. ಅಂದರೆ ಆಸ್ಪತ್ರೆಗೆ ದಾಖಲಾಗದೆ ವೈದ್ಯರನ್ನು ಭೇಟಿ ಮಾಡುವುದು, ಸಮಾಲೋಚನೆ ನಡೆಸುವುದು ಮತ್ತು ಔಷಧಿಗಳನ್ನು ಖರೀದಿಸುವುದು ಈ ವಿಭಾಗದ ಅಡಿಗೆ ಬರುತ್ತದೆ. ನೀವು ನಿಮ್ಮ ಹೆಲ್ತ್ ಇನ್ಶೂರೆನ್ಸ್ನಲ್ಲಿ ಒಪಿಡಿ ಕವರೇಜ್ ಪಡೆದಿದ್ದರೆ, ಜ್ವರ-ಶೀತದಂತಹ ಸಣ್ಣ ಕಾಯಿಲೆಗಳ ಚಿಕಿತ್ಸಾ ವೆಚ್ಚ, ವೈದ್ಯರ ಫೀಸ್ ಮತ್ತು ಔಷಧದ ಖರ್ಚುಗಳನ್ನು ವಿಮಾ ಕಂಪನಿಯೇ ಭರಿಸುತ್ತದೆ. ಆದರೆ ಇದಕ್ಕೆ ನೀವು ಸಾಮಾನ್ಯ ಪ್ರೀಮಿಯಂಗಿಂತ ಸ್ವಲ್ಪ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಒಪಿಡಿ ಕವರೇಜ್ ಯಾರಿಗೆ ಹೆಚ್ಚು ಉಪಯುಕ್ತ?
ದೀರ್ಘಕಾಲದ ಕಾಯಿಲೆ ಇರುವವರಿಗೆ: ಮಧುಮೇಹ (Sugar), ರಕ್ತದೊತ್ತಡ (BP) ಯಂತಹ ದೀರ್ಘಕಾಲದ ಕಾಯಿಲೆ ಇರುವವರು ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಇಂತವರಿಗೆ ಒಪಿಡಿ ಕವರೇಜ್ ತುಂಬಾ ಲಾಭದಾಯಕ ಹಾಗೂ ವೈದ್ಯರ ಫೀಸ್ ಉಳಿಸಲು ಸಹಾಯ ಮಾಡುತ್ತದೆ.
ಇತರ ಚಿಕಿತ್ಸೆಗಳು: ಕೆಲವು ನಿರ್ದಿಷ್ಟ ದಂತ ಚಿಕಿತ್ಸೆ (Dental Treatment) ಮತ್ತು ಫಿಸಿಯೋಥೆರಪಿಗಳಿಗೂ ಒಪಿಡಿ ಅನ್ವಯಿಸುತ್ತದೆ.
ಆಯುಷ್ ಚಿಕಿತ್ಸೆ: ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ನಂತಹ ಆಯುಷ್ ಚಿಕಿತ್ಸೆಗಳಿಗೂ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ.
ಗಮನಿಸಬೇಕಾದ ಅಂಶ:
ಕೇವಲ ಅಪರೂಪಕ್ಕೊಮ್ಮೆ ಜ್ವರ, ಶೀತ ಬರುವವರಿಗೆ ಈ ಒಪಿಡಿ ಕವರೇಜ್ ಅಷ್ಟಾಗಿ ಪ್ರಯೋಜನಕಾರಿಯಲ್ಲ. ಏಕೆಂದರೆ ಇದಕ್ಕಾಗಿ ಹೆಚ್ಚಿನ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಅಲ್ಲದೆ, ಒಪಿಡಿ ಕವರ್ ತೆಗೆದುಕೊಳ್ಳುವ ಮುನ್ನ ಪಾಲಿಸಿ ದಾಖಲೆಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಉದಾಹರಣೆಗೆ, ನಿಮ್ಮ ಒಪಿಡಿ ಕವರೇಜ್ ಮಿತಿ 10,000 ರೂ. ಇದ್ದರೂ, ಒಂದು ಬಾರಿಯ ವೈದ್ಯರ ಭೇಟಿಗೆ ಗರಿಷ್ಠ 500 ರೂ. ಮಾತ್ರ ನೀಡಲಾಗುವುದು ಎಂಬಂತಹ ಕೆಲವು ನಿಯಮಗಳು ಮತ್ತು ನಿಬಂಧನೆಗಳು (Terms and Conditions) ಇರುತ್ತವೆ. ಆದ್ದರಿಂದ ಪಾಲಿಸಿ ಖರೀದಿಸುವ ಮುನ್ನ ಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ.








