ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. 2024-25 ರಿಂದ 2025-26ರ (ಅಕ್ಟೋಬರ್ 2025) ಅವಧಿಯವರೆಗೆ ಖಾಲಿ ಇರುವ ಹುದ್ದೆಗಳ ಪೈಕಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಟ್ಟು 1,725 ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.
ಜೂನ್ 6, 2026 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR – ರಾಜಕೀಯ) ಇಲಾಖೆಯ ಶಾಖಾಧಿಕಾರಿ ಲಕ್ಷ್ಮೀದೇವಿ ಆರ್. ಅವರು ಈ ಕುರಿತು ಅಧಿಕೃತ ಅನಧಿಕೃತ ಟಿಪ್ಪಣಿಯನ್ನು ಹೊರಡಿಸಿದ್ದಾರೆ.
ಯಾವ ಯಾವ ಹುದ್ದೆಗಳು ಭರ್ತಿಯಾಗಲಿವೆ?
ಆರ್ಥಿಕ ಇಲಾಖೆಯು ನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಲು ಒಪ್ಪಿಗೆ ನೀಡಿರುವ ಹುದ್ದೆಗಳ ವಿವರ ಹೀಗಿದೆ:
ಜನರಲ್ ಡೆಪ್ಯುಟಿ ಮೆಡಿಕಲ್ ಆಫೀಸರ್ (ಗ್ರೂಪ್-ಎ): 100 ಹುದ್ದೆಗಳು
ಸ್ಪೆಷಲಿಸ್ಟ್ಗಳು (ಗ್ರೂಪ್-ಎ): 120 ಹುದ್ದೆಗಳು
ANMS (ಆಕ್ಸಿಲರಿ ನರ್ಸ್ ಮಿಡ್ವೈಫ್) (ಗ್ರೂಪ್-ಸಿ): 1,205 ಹುದ್ದೆಗಳು
HIOS (ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್) (ಗ್ರೂಪ್-ಸಿ): 300 ಹುದ್ದೆಗಳು
ಒಟ್ಟು ಹುದ್ದೆಗಳು: 1,725
ಕಲ್ಯಾಣ ಕರ್ನಾಟಕ ವೃಂದದ 1,104 ಹುದ್ದೆಗಳ ವಿವರ
ಇದಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ-ಕರ್ನಾಟಕ ವೃಂದದಲ್ಲಿ ಅನುಚ್ಛೇದ 371-ಜೆ ಅನ್ವಯ ಸ್ಥಳೀಯ ವೃಂದದಡಿ (ಪ್ರಾದೇಶಿಕ + ರಾಜ್ಯ ಮಟ್ಟದ) ನೇರ ನೇಮಕಾತಿಗಾಗಿ ಖಾಲಿ ಇರುವ ಒಟ್ಟು 1,104 ಹುದ್ದೆಗಳ ವಿವರವನ್ನೂ ಸಹ ಈ ಪತ್ರದಲ್ಲಿ ನೀಡಲಾಗಿದೆ:
ಗ್ರೂಪ್ ಎ: 220
ಗ್ರೂಪ್ ಬಿ: 74
ಗ್ರೂಪ್ ಸಿ: 325
ಗ್ರೂಪ್ ಡಿ: 485
ನೇಮಕಾತಿ ಪ್ರಕ್ರಿಯೆಗೆ ಸೂಚನೆ
ಪ್ರಸ್ತಾವಿತ ಹುದ್ದೆಗಳನ್ನು ಭರ್ತಿ ಮಾಡಲು KPSC, KEA ಅಥವಾ ಇತರ ಸೂಕ್ತ ಆಯ್ಕೆ ಪ್ರಾಧಿಕಾರಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿದೆ. ಒಂದು ವೇಳೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದರೆ ಅಥವಾ ಇನ್ನು ಮುಂದೆ ಸಲ್ಲಿಸಬೇಕಿದ್ದರೆ, ಆ ಮಾಹಿತಿಯನ್ನು ನಿಗದಿತ ಗೂಗಲ್ ಶೀಟ್ ಲಿಂಕ್ನಲ್ಲಿ ಅಪ್ಡೇಟ್ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಡಿಪಿಎಆರ್ ಇಲಾಖೆಯು ಪತ್ರದ ಮೂಲಕ ಕೋರಿದೆ.
ಬಹಳ ದಿನಗಳಿಂದ ಆರೋಗ್ಯ ಇಲಾಖೆಯ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಲಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಗಳು ಹೊರಬೀಳುವ ನಿರೀಕ್ಷೆಯಿದೆ.









