ಬೆಂಗಳೂರು: ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಿದ್ದ ಅಸಮಾಧಾನ ಕೊನೆಗೂ ತಣ್ಣಗಾಗಿದ್ದು, ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಅಧಿಕೃತವಾಗಿ ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರಾಗಿ (GBA Minister) ಜಿಬಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆ್ಯಕ್ಷನ್ ಮೂಡ್‌ಗೆ ಜಾರಿದ ಸಚಿವರು, ನಗರದ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐದು ಜಿಬಿಎ ಆಯುಕ್ತರ ಜೊತೆ ಸರಣಿ ಸಭೆ:
ಅಧಿಕಾರ ಸ್ವೀಕರಿಸಿದ ತಕ್ಷಣವೇ ಸಚಿವ ಕೃಷ್ಣ ಬೈರೇಗೌಡ ಅವರು ಐದು ಜಿಬಿಎ ಆಯುಕ್ತರ ಮಹತ್ವದ ಸಭೆ ನಡೆಸಿದರು. ಜಿಬಿಎ ವ್ಯಾಪ್ತಿಯಲ್ಲಿ ಪ್ರಸ್ತುತ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಪ್ರಗತಿ ಹಾಗೂ ಮುಂಬರುವ ಯೋಜನೆಗಳ ಕುರಿತು ಆಯುಕ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
“ಬೆಂಗಳೂರು ಅಂದರೆ ಗುಂಡಿ ಯಾಕೆ?” – ಅಧಿಕಾರಿಗಳಿಗೆ ಕ್ಲಾಸ್:
ಸಭೆಯ ಉದ್ದಕ್ಕೂ ನಗರದ ರಸ್ತೆಗಳ ದುಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಧಿಕಾರಿಗಳಿಗೆ ಸರಿಯಾಗಿಯೇ ಕ್ಲಾಸ್ ತಗೆದುಕೊಂಡರು. ರಸ್ತೆ ಗುಂಡಿಗಳ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಕೇಳಿದ ಖಡಕ್ ಪ್ರಶ್ನೆಗಳು ಹೀಗಿದ್ದವು:
“ನಗರದಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿಗಳು ಹೆಚ್ಚುತ್ತಿವೆ. ನಿಮಗೆ ಗುಂಡಿಯಿಲ್ಲದ ರಸ್ತೆ ನಿರ್ಮಾಣ ಮಾಡಲು ಆಗಲ್ವಾ?”
“ಒಂದು ಕಡೆ ರಸ್ತೆ ದುರಸ್ತಿ ಮಾಡುತ್ತೀರಾ, ಮತ್ತೊಂದು ಕಡೆ ತಕ್ಷಣವೇ ಗುಂಡಿ ಬೀಳುತ್ತದೆ. ಇದು ಯಾಕೆ ಹೀಗಾಗುತ್ತಿದೆ?”
“ದೇಶದ ಬೇರೆ ರಾಜ್ಯಗಳಲ್ಲಿ ಇಂತಹ ರಸ್ತೆ ಗುಂಡಿಗಳ ಸಮಸ್ಯೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇಲ್ಲ. ಕೇವಲ ಬೆಂಗಳೂರಿನಲ್ಲಿ ಮಾತ್ರ ಯಾಕೆ ಈ ಪರಿಸ್ಥಿತಿ? ಬೆಂಗಳೂರು ಅಂದ ತಕ್ಷಣ ರಸ್ತೆ ಗುಂಡಿಗಳೇ ನೆನಪಿಗೆ ಬರುವಂತಾಗಿದ್ದು ಯಾಕೆ?”
ಮೊದಲ ಸಭೆಯಲ್ಲೇ ಸಚಿವರು ತೋರಿದ ಕಠಿಣ ನಿಲುವು ಮತ್ತು ಖಡಕ್ ಎಚ್ಚರಿಕೆ, ಮುಂಬರುವ ದಿನಗಳಲ್ಲಿ ಬೆಂಗಳೂರಿನ ಮೂಲಸೌಕರ್ಯ ಹಾಗೂ ರಸ್ತೆಗಳ ಸುಧಾರಣೆಗೆ ಅವರು ಆದ್ಯತೆ ನೀಡಲಿದ್ದಾರೆ ಎಂಬ ದಿಕ್ಸೂಚಿಯನ್ನು ನೀಡಿದೆ.
ಬುಧವಾರದಂದು 27 ಬಾರಿ ಈ ಮಂತ್ರವನ್ನು ಪಠಿಸಿ; ನಿಮ್ಮ ದಡ್ಡರಾದ ಮಕ್ಕಳು ಚೆನ್ನಾಗಿ ಓದೋದು ಗ್ಯಾರಂಟಿ








