ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬೇಟೆ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. ಕಲಬುರಗಿ, ಚಿಕ್ಕಮಗಳೂರು ಹಾಗೂ ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಬೀಡುಬಿಟ್ಟಿದ್ದು, ತೀವ್ರ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ನಗರದ ಪ್ರತಿಷ್ಠಿತ ಗೋದುತಾಯಿ ನಗರದಲ್ಲಿರುವ ನಿವಾಸ ಸೇರಿದಂತೆ ಒಟ್ಟು 5 ಪ್ರಮುಖ ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಆಸ್ತಿಪಾಸ್ತಿ ಹಾಗೂ ಪ್ರಮುಖ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೀದರ್ ಜಿಲ್ಲೆಯಲ್ಲೂ ಲೋಕಾಯುಕ್ತ ಬಿಸಿ ತಟ್ಟಿದೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ಅವರ ನೇರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹಳ್ಳಿಖೇಡ ಗ್ರಾಮದಲ್ಲಿರುವ ನಿವಾಸ, ತೋಟದ ಮನೆ ಹಾಗೂ ಹುಮ್ನಾಬಾದ್ನಲ್ಲಿರುವ ಎರಡು ಕಾಂಪ್ಲೆಕ್ಸ್ಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದೆ.
ಚಿಕ್ಕಮಗಳೂರು ನಗರದಲ್ಲೂ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಅರಣ್ಯ ಇಲಾಖೆಯ ಅಧಿಕಾರಿಗೆ ಶಾಕ್ ನೀಡಿದ್ದಾರೆ. ನಗರದ ಕಲ್ಯಾಣನಗರದಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಮೋಹನ್ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಎಫ್ ಮೋಹನ್ ವಿರುದ್ಧ ಆಸ್ತಿ ಗಳಿಕೆ ಹಾಗೂ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದ ತಂಡ ದಾಳಿ ನಡೆಸಿ, ಅವರ ಅಕ್ರಮ ಆಸ್ತಿ ವಿವರ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸುತ್ತಿದೆ.








