ಶಿವಮೊಗ್ಗ: “ರಾಜ್ಯ ಸಚಿವ ಸಂಪುಟದಲ್ಲಿ ನನಗೆ ಶೇ. 100 ರಷ್ಟು ಸಚಿವ ಸ್ಥಾನ ನೀಡುವ ಭರವಸೆ ಇದೆ. ಸಚಿವ ಸ್ಥಾನಕ್ಕಾಗಿ ಈಗಾಗಲೇ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ವಿಶೇಷವಾಗಿ ಮಲೆನಾಡು ಭಾಗಕ್ಕೆ ಅರಣ್ಯ ಖಾತೆ ನೀಡುವಂತೆ ಆಗ್ರಹಿಸಲಾಗಿದೆ. ಸರ್ಕಾರ ಯಾವುದೇ ಖಾತೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯು ಜೂನ್ 23 ಅಥವಾ 24 ರಂದು ನಡೆಯಲಿದೆ ಎಂದು ಮಹತ್ವದ ಮಾಹಿತಿ ನೀಡಿದರು.
ರೆಸಾರ್ಟ್ ರಾಜಕೀಯ ಸಮರ್ಥನೆ
ವಿಧಾನ ಪರಿಷತ್ ಚುನಾವಣೆ ಕುರಿತು ಮಾತನಾಡಿದ ಶಾಸಕರು, “ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ನೂರಕ್ಕೆ ನೂರರಷ್ಟು ನಿಶ್ಚಿತ. ನಮಗೆ ಇಬ್ಬರು ಶಾಸಕರ ಮತಗಳ ಕೊರತೆ ಮಾತ್ರ ಇದ್ದು, ಆ ಮತಗಳು ಕೂಡ ನಮ್ಮ ಬಳಿಯೇ ಇವೆ. ಚುನಾವಣೆಯಲ್ಲಿ ಯಾವುದೇ ಅಡ್ಡ ಮತದಾನ (Cross Voting) ಆಗದಂತೆ ತಡೆಯಲು ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ಗೆ ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ರೆಸಾರ್ಟ್ನಲ್ಲಿ ರಾಜಕೀಯ ಸ್ಥಿತಿಗತಿ ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತು ಸುದೀರ್ಘವಾಗಿ ಚರ್ಚಿಸಲು ನಮಗೆ ಒಳ್ಳೆಯ ಅನುಕೂಲವಾಗುತ್ತದೆ” ಎಂದು ರೆಸಾರ್ಟ್ ವಾಸ್ತವ್ಯವನ್ನು ಸಮರ್ಥಿಸಿಕೊಂಡರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅನಿವಾರ್ಯ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿದ ಬೇಳೂರು, “ಯೋಜನೆಗಳ ಪರಿಷ್ಕರಣೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರದ ಗ್ಯಾರಂಟಿ ಸೌಲಭ್ಯಗಳು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಎನ್ನುವುದು ನಮ್ಮ ಆಶಯ. ಸದ್ಯದ ಪರಿಸ್ಥಿತಿಯಲ್ಲಿ ಮೃತಪಟ್ಟವರ ಹೆಸರಿನಲ್ಲೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾತ್ರ ಪರಿಷ್ಕರಣೆ ನಡೆಸಲಾಗುತ್ತಿದೆಯೇ ಹೊರತು, ಸರ್ಕಾರದ ಯಾವುದೇ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಮೆಸ್ಕಾಂ ಖಾಸಗೀಕರಣಕ್ಕೆ ವಿರೋಧ
ವಿದ್ಯುತ್ ಕಂಪನಿಗಳ ಖಾಸಗೀಕರಣದ ಕುರಿತು ಮೆಸ್ಕಾಂ ನೌಕರರು ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರ ಜೊತೆ ನೇರವಾಗಿ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ವಿದ್ಯುತ್ ಕಂಪನಿಗಳ ಖಾಸಗೀಕರಣ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಕಾಂಗ್ರೆಸ್ ಪ್ರಮುಖರಾದ ಕಲಸೆ ಚಂದ್ರಪ್ಪ, ಮಧುಮಾಲತಿ, ಸೈಯದ್ ಜಾಕೀರ್, ಅನ್ವರ್ ಭಾಷಾ, ಗಣಪತಿ ಮಂಡಗಳಲೆ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ದಾವಣಗೆರೆಯಲ್ಲಿ ಭೀಕರ ಅಗ್ನಿ ದುರಂತ; ಒಂದರ ಬೆನ್ನಲ್ಲೇ 18 ಸಿಲಿಂಡರ್ ಸ್ಫೋಟ, ಇಬ್ಬರಿಗೆ ಗಂಭೀರ ಗಾಯ!
ಕೆಪಿಟಿಸಿಎಲ್ ನಿಂದ ಪ್ರಾಯೋಗಿಕವಾಗಿ ಬೆಂಗಳೂರು ಕಾರಿಡಾರ್ನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ








