ತೆಹ್ರಾನ್:”ಜಗತ್ತಿನಲ್ಲಿ ಪರಮಾಣು ಅಸ್ತ್ರಗಳ ಬಳಕೆಯನ್ನು ತಡೆಯಲು ಇದೊಂದು ಬಲವಾದ ಗೋಡೆಯಾಗಲಿದೆ” ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಹುನಿರೀಕ್ಷಿತ ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಇಂದು (ಭಾನುವಾರ) ಅಧಿಕೃತವಾಗಿ ಸಹಿ ಬೀಳಲಿದೆ ಎಂದು ಘೋಷಿಸಿದ್ದಾರೆ. ಈ ಒಪ್ಪಂದದೊಂದಿಗೆ ಜಗತ್ತಿನ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಮತ್ತೆ ಮುಕ್ತಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಪ್ಪಂದದ ಕುರಿತು ಜಾಗತಿಕ ಮಾಧ್ಯಮಗಳಿಗೆ ಮಹತ್ವದ ಹೇಳಿಕೆ ನೀಡಿರುವ ಅಧ್ಯಕ್ಷ ಟ್ರಂಪ್, “ನಾವು ಇರಾನ್ ಜೊತೆಗೆ ಅತ್ಯಂತ ಪ್ರಮುಖವಾದ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ. ಇದು ಕೇವಲ ಎರಡು ದೇಶಗಳ ನಡುವಿನ ಒಪ್ಪಂದವಲ್ಲ, ಇಡೀ ವಿಶ್ವದ ಸುರಕ್ಷತೆಯ ದೃಷ್ಟಿಯಿಂದ ಇದೊಂದು ಐತಿಹಾಸಿಕ ಹೆಜ್ಜೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಬಾಂಬ್ ತಯಾರಿಸುವುದಿಲ್ಲ ಎಂಬ ಗ್ಯಾರಂಟಿ ಈ ಒಪ್ಪಂದದಲ್ಲಿದೆ” ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಜಲಮಾರ್ಗವನ್ನು ಈ ಒಪ್ಪಂದದ ತಕ್ಷಣವೇ ಮುಕ್ತಗೊಳಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ. ಜಗತ್ತಿನ ಒಟ್ಟು ತೈಲ ಸಾರಿಗೆಯ ಬಹುದೊಡ್ಡ ಭಾಗವು ಈ ಮಾರ್ಗದ ಮೂಲಕವೇ ಸಾಗುವುದರಿಂದ, ಇದು ಮುಕ್ತಗೊಳ್ಳುತ್ತಿರುವುದು ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಧನ ದರ ಮತ್ತು ಆರ್ಥಿಕತೆ ಸ್ಥಿರಗೊಳ್ಳಲು ನೆರವಾಗಲಿದೆ.
ಇಂದು ಒಪ್ಪಂದ ನಡೆಯಲಿದೆ ಎಂದು ಅಮೆರಿಕ ಮತ್ತು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಪ್ರಧಾನಿ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವಾಲಯವು “ಕೆಲವು ತಾಂತ್ರಿಕ ಕಾರಣಗಳಿಂದಾಗಿ ಭಾನುವಾರವೇ ಸಹಿ ಹಾಕುವುದು ಅನುಮಾನ” ಎಂದು ಶನಿವಾರವಷ್ಟೇ ಹೇಳಿಕೆ ನೀಡಿತ್ತು. ಆದರೆ, ಡೊನಾಲ್ಡ್ ಟ್ರಂಪ್ ಇಂದು ಒಪ್ಪಂದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ದೃಢವಾಗಿ ಹೇಳಿರುವುದು ಇಡೀ ವಿಶ್ವದ ಗಮನವನ್ನು ರಾಜತಾಂತ್ರಿಕ ವೇದಿಕೆಯತ್ತ ಸೆಳೆಯುವಂತೆ ಮಾಡಿದೆ.
ಕಳೆದ ಫೆಬ್ರವರಿಯಿಂದ ನಡೆಯುತ್ತಿರುವ ಅಮೆರಿಕ-ಇರಾನ್ ನಡುವಿನ ಸೈನಿಕ ಸಂಘರ್ಷಕ್ಕೆ ಅಧಿಕೃತ ಮುಕ್ತಾಯ ಹಾಡುವುದು.ಜಲಮಾರ್ಗದಲ್ಲಿ ಇರಾನ್ ಅಳವಡಿಸಿರುವ ಅಪಾಯಕಾರಿ ಮೈನ್‌ಗಳನ್ನು (Explosive mines) ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳ ಸಹಾಯದೊಂದಿಗೆ ತೆರವುಗೊಳಿಸುವುದು.
ಇಂದು ಒಪ್ಪಂದ ಯಶಸ್ವಿಯಾಗಿ ಪೂರ್ಣಗೊಂಡರೆ, ಜಾಗತಿಕ ಷೇರು ಮಾರುಕಟ್ಟೆ ಮತ್ತು ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಭಾರಿ ಧನಾತ್ಮಕ ಬದಲಾವಣೆಗಳು ಕಂಡುಬರುವ ನಿರೀಕ್ಷೆಯಿದೆ.








