ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಈ ವಾರದ ಆರಂಭದಲ್ಲಿ ಬಹು-ಪದರಗಳ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ (BMD) ಸಾಮರ್ಥ್ಯವನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ಈ ವ್ಯವಸ್ಥೆಯು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು (ICBMs) ಸೇರಿದಂತೆ ವಿವಿಧ ಗುರಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಬಲ್ಲದು. ಈ ಅದ್ಭುತ ಪ್ರಗತಿಯೊಂದಿಗೆ, ಭಾರತವು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳ (ICBM) ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಜಗತ್ತಿನ ಅತ್ಯಂತ ಆಯ್ದ ರಾಷ್ಟ್ರಗಳ ಗಣ್ಯ ಸಮೂಹಕ್ಕೆ ಸೇರ್ಪಡೆಯಾಗಿದೆ.
ದೂರ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ವಿರುದ್ಧದ ಬಹು-ಪದರಗಳ ರಕ್ಷಣೆ ಮತ್ತು ಮಧ್ಯಮ ವ್ಯಾಪ್ತಿಯ ಹಡಗು-ವಿರೋಧಿ (Anti-ship) ಸಾಮರ್ಥ್ಯವನ್ನು ಪ್ರದರ್ಶಿಸಲು ಡಿಆರ್ಡಿಒ ಜೂನ್ 10 ಮತ್ತು 11 ರಂದು ಸತತ ಮೂರು ಹಾರಾಟ ಪರೀಕ್ಷೆಗಳನ್ನು ನಡೆಸಿದೆ ಎಂದು ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 10 ಮತ್ತು 11 ರಂದು ನಡೆದ ಪರೀಕ್ಷೆಗಳ ಸಂದರ್ಭದಲ್ಲಿ ಬಹು-ಪದರಗಳ ಬಿಎಂಡಿ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. “ಇಂಟರ್ಸೆಪ್ಟರ್ (ಶತ್ರು ಕ್ಷಿಪಣಿಗಳನ್ನು ತಡೆಯುವ) ಕ್ಷಿಪಣಿಗಳು ತಮ್ಮ ನಿಗದಿತ ಗುರಿಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದವು. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಕ್ಷಿಪಣಿ ಭೀತಿಗಳನ್ನು ಎದುರಿಸಲು ಈ ವ್ಯವಸ್ಥೆಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ” ಎಂದು ಸಚಿವಾಲಯ ಹೇಳಿದೆ.
ಈ ಪರೀಕ್ಷೆಗಳು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳವರೆಗಿನ ದಾಳಿಗಳನ್ನು ತಡೆಯಬಲ್ಲ ಬಿಎಂಡಿ ಸಾಮರ್ಥ್ಯ ಹೊಂದಿರುವ ಜಗತ್ತಿನ ಕೆಲವೇ ಕೆಲವು ಪ್ರಭಾವಿ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ತಂದು ನಿಲ್ಲಿಸಿವೆ ಎಂದು ಪ್ರಕಟಣೆಯಲ್ಲಿ ಒತ್ತಿಹೇಳಲಾಗಿದೆ.
ಇದರೊಂದಿಗೆ, ನೌಕಾಸೇನೆಯ ಮಧ್ಯಮ ವ್ಯಾಪ್ತಿಯ ಹಡಗು-ವಿರೋಧಿ ಕ್ಷಿಪಣಿಯ (NASM-MR) ಚೊಚ್ಚಲ ಹಾರಾಟ ಪರೀಕ್ಷೆಯನ್ನು ಸಹ ಯಶಸ್ವಿಯಾಗಿ ನಡೆಸಲಾಯಿತು ಎಂದು ತಿಳಿಸಲಾಗಿದ್ದು, ಈ ಹಾರಾಟ ಪರೀಕ್ಷೆಗಳಿಗೆ ಡಿಆರ್ಡಿಒ ಮತ್ತು ರಕ್ಷಣಾ ಪಡೆಗಳ ಹಿರಿಯ ಅಧಿಕಾರಿಗಳು ಸಾಕ್ಷಿಯಾಗಿದ್ದರು ಎಂದು ಸೇರಿಸಲಾಗಿದೆ.
ಈ ನಿರ್ಣಾಯಕ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಡಿಆರ್ಡಿಒ ಸಂಸ್ಥೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ. ಡಿಆರ್ಡಿಒ ಅಧ್ಯಕ್ಷ ರಾಜೇಶ್ ಕುಮಾರ್ ಸಿಂಗ್ ಅವರು ಈ ಪರೀಕ್ಷೆಗಳ ಮೇಲ್ವಿಚಾರಣೆ ನಡೆಸಿದ್ದು, ಡಿಆರ್ಡಿಒ ಮತ್ತು ಭಾರತೀಯ ರಕ್ಷಣಾ ಉದ್ಯಮದ ಜಂಟಿ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.








