ಯಾದಗಿರಿ: ದಿನಕ್ಕೆ ಮೂರರಿಂದ ನಾಲ್ಕು ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ ಯುವಕನೊಬ್ಬ ಕಿಡ್ನಿ ಫೇಲ್ ಆಗಿ (ಮೂತ್ರಪಿಂಡದ ವೈಫಲ್ಯ) ಮೃತಪಟ್ಟಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಬಾಲು ದೇಸಾಯಿ ಮೃತಪಟ್ಟ ದುರ್ದೈವಿ ಯುವಕ. ಮೃತ ಯುವಕ ಬಾಲು ದೇಸಾಯಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಸತತವಾಗಿ 3 ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಅನ್ನು ಅತಿಯಾಗಿ ಸೇವಿಸುತ್ತಿದ್ದ ಎಂದು ಹೇಳಲಾಗಿದೆ.ಅಷ್ಟೊಂದು ಪ್ರಮಾಣದಲ್ಲಿ ಸ್ಟಿಂಗ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕುಟುಂಬದವರು ಮತ್ತು ಸ್ನೇಹಿತರು ಪದೇ ಪದೇ ಬುದ್ಧಿವಾದ ಹೇಳಿದ್ದರೂ ಯುವಕ ಅವರ ಮಾತುಗಳನ್ನು ಕೇಳದೆ ನಿರ್ಲಕ್ಷಿಸಿದ್ದನು.
ಇತ್ತೀಚೆಗೆ ಯುವಕನ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಯುವಕನ ದೇಹದಲ್ಲಿ ಅತಿಯಾದ ಕೆಫೀನ್ ಹಾಗೂ ರಾಸಾಯನಿಕಗಳ (Chemicals) ಅಂಶ ಸೇರಿದ ಪರಿಣಾಮವಾಗಿ ಆತನ ಕಿಡ್ನಿ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾನೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.








