ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಿನಿಂದ ತ್ಯಾಗರ್ತಿವರೆಗಿನ 110 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಆಗ್ರಹಿಸಿ ಇಂದು ಗ್ರಾಮಸ್ಥರು ಸಾಗರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರ ಸಂಕಷ್ಟ
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಕೊಪ್ಪ ಅವರು, ಬರೂರು, ತ್ಯಾಗರ್ತಿ, ಹಿರೇಬಿಲಗುಂಜಿ, ಉಳ್ಳೂರು ಹಾಗೂ ಗೌತಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರು ದೀರ್ಘಕಾಲದಿಂದ ತೀವ್ರ ವಿದ್ಯುತ್ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು. ಈ ಭಾಗದ ವಿದ್ಯುತ್ ಸಮಸ್ಯೆಯನ್ನು ಮನಗಂಡು ಕಾಗೋಡು ತಿಮ್ಮಪ್ಪ ಅವರು ಅಧಿಕಾರದಲ್ಲಿದ್ದಾಗ ತ್ಯಾಗರ್ತಿಯಲ್ಲಿ 11 ಕೆ.ವಿ. ವಿದ್ಯುತ್ ಗ್ರಿಡ್ ಮಂಜೂರಾತಿ ಮಾಡಿಸಿದ್ದರು. ನಂತರ ಹರತಾಳು ಹಾಲಪ್ಪ ಅವರು ಶಾಸಕರಾಗಿದ್ದಾಗ ಮತ್ತು ಸುನೀಲ್ ಕುಮಾರ್ ಅವರು ಇಂಧನ ಸಚಿವರಾಗಿದ್ದ ಅವಧಿಯಲ್ಲಿ ಈ ಯೋಜನೆ ಅನುಷ್ಟಾನಕ್ಕೆ ಬಂದಿತ್ತು ಎಂದು ಯೋಜನೆಯ ಹಿನ್ನೆಲೆಯನ್ನು ಸ್ಮರಿಸಿದರು.
ಕಾಮಗಾರಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಆಕ್ರೋಶ
ಪ್ರಸ್ತುತ ಯೋಜನೆ ಅಂತಿಮ ಹಂತಕ್ಕೆ ತಲುಪಿದ್ದರೂ, ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದ ಅವರು, ಉಳ್ಳೂರು-ತ್ಯಾಗರ್ತಿ ಮಾರ್ಗದಲ್ಲಿ ವಿದ್ಯುತ್ ತಂತಿ ಒಯ್ಯಲು ತಡೆಯೊಡ್ಡಲಾಗುತ್ತಿದೆ ಎಂದರು. ಹಾಲಿ ನಿರ್ಧಾರವಾಗಿರುವ ಮಾರ್ಗವನ್ನು ಬದಲಾಯಿಸಿ ಬೇರೆ ಕಡೆಯಿಂದ ಒಯ್ಯಬೇಕು ಎಂದು ಕೆಲವರು ಸಂಸದರ ಮೇಲೆ ಒತ್ತಡ ಹೇರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂಸದರಿಗೆ ಈ ವಿಷಯದಲ್ಲಿ ತಪ್ಪು ಮಾಹಿತಿ ನೀಡಿರುವುದು ಸರಿಯಲ್ಲ. ಪ್ರಸ್ತುತ ನಕ್ಷೆಯ ಯೋಜನೆಯಂತೆಯೇ ವಿದ್ಯುತ್ ತಂತಿ ಎಳೆದರೆ ಯಾರಿಗೂ ತೊಂದರೆ ಆಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಬರುವ ಡಿಸೆಂಬರ್ ಒಳಗೆ ಕೆಲಸವನ್ನು ಮುಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಂಸದರ ಸಲಹೆ
ಗ್ರಾಮಸ್ಥರ ಅಹವಾಲು ಆಲಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಅಭಿವೃದ್ಧಿ ಕೆಲಸಗಳ ಸಂದರ್ಭದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಅಧಿಕಾರಿಗಳು ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ಮನವಿ ಸಲ್ಲಿಸಲು ಬಂದಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆ ಅಥವಾ ವಿರೋಧ ವ್ಯಕ್ತಪಡಿಸುತ್ತಿರುವವರೂ ಸಹ ನಿಮ್ಮಂತೆಯೇ ರೈತರಾಗಿರುವುದರಿಂದ, ಎಲ್ಲರೂ ಒಟ್ಟಿಗೆ ಕುಳಿತು ಪರಸ್ಪರ ಚರ್ಚೆ ಮಾಡುವ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹಿತವಚನ ನೀಡಿದರು.
ಪ್ರಮುಖರ ಉಪಸ್ಥಿತಿ
ಈ ಸಂದರ್ಭದಲ್ಲಿ ವಿರೇಶ್ ಬರೂರು, ಶ್ರೀಧರ ಜಿಗಳೆಮನೆ, ಶ್ರೀನಾಥ್ ನಿಚಡಿ, ಕೃಷ್ಣಮೂರ್ತಿ ಹೊಸಂತೆ, ಗಿರೀಶ್ ಮಳ್ಳ, ಸತ್ಯನಾರಾಯಣ ಕಾಗೋಡು ದಿಂಬ, ನಿಂಗಪ್ಪ ತ್ಯಾಗರ್ತಿ, ರೇಣುಕಮ್ಮ, ಮಹಾಬಲೇಶ್ವರ ಸೇರಿದಂತೆ ಮುಂತಾದ ಪ್ರಮುಖರು ಹಾಜರಿದ್ದರು.
ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ








