ಶಿವಮೊಗ್ಗ: ಇಡೀ ಜಗತ್ತೇ ಭಾರತದ ಕಡೆ ತಿರುಗಿ ನೋಡುವಂತಹ ಶ್ರೇಷ್ಟ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಹಿಂದಿನ ಎಲ್ಲ ಪ್ರಧಾನ ಮಂತ್ರಿಗಳ ಅಧಿಕಾರಾವಧಿಯ ದಾಖಲೆಗಳನ್ನು ಮುರಿಯುವ ಜೊತೆಗೆ, ದೇಶದ ಸರ್ವಾಂಗೀಣ ಅಭಿವೃದ್ದಿಯಲ್ಲೂ ಮೋದಿಯವರು ವಿಶೇಷ ಸಾಧನೆ ಮಾಡಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಹನ್ನೆರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವನಮಹೋತ್ಸವ’ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ರೈಲ್ವೆ ನಿಲ್ದಾಣದ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಯ ಸಿಂಹಪಾಲು
ಭವಿಷ್ಯದ ದೂರದೃಷ್ಟಿಯಿಂದಾಗಿ ದೇಶದಲ್ಲಿ ರೈಲ್ವೆ ಜಾಲವನ್ನು ವ್ಯಾಪಕವಾಗಿ ವಿಸ್ತರಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಗೂ ಅಭಿವೃದ್ದಿಯ ಸಿಂಹಪಾಲು ದೊರೆತಿದೆ ಎಂದು ಸಂಸದರು ಹೆಮ್ಮೆಯಿಂದ ಹಂಚಿಕೊಂಡರು. ಶಿವಮೊಗ್ಗದಿಂದ ತಾಳಗುಪ್ಪವರೆಗೆ ರೈಲ್ವೆ ಮೂಲಸೌಲಭ್ಯಗಳನ್ನು ಅಭಿವೃದ್ದಿಪಡಿಸಲು ಸುಮಾರು ನೂರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ತಾಳಗುಪ್ಪದಿಂದ ಸಿದ್ದಾಪುರ, ಶಿರಸಿ, ಹುಬ್ಬಳ್ಳಿ ರೈಲ್ವೆ ಸಂಪರ್ಕ ವಿಸ್ತರಣೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ವಿಶೇಷ ಗಮನ ಹರಿಸಲಾಗಿದೆ ಎಂದರು.
ಯಡಿಯೂರಪ್ಪ ಅವರ ಇಚ್ಛಾಶಕ್ತಿಯಿಂದ ರೈಲ್ವೆ ಮಾರ್ಗ ರಕ್ಷಣೆ
ಸಾಗರಕ್ಕೆ ಇಂದು ರೈಲ್ವೆ ಸಂಪರ್ಕ ಉಳಿದಿದೆ ಎಂದರೆ ಅದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಇಚ್ಛಾಶಕ್ತಿಯೇ ಕಾರಣ ಎಂದು ಸ್ಮರಿಸಿದ ಸಂಸದರು, ಬ್ರಾಡ್ಗೇಜ್ ನಿರ್ಮಾಣಕ್ಕಾಗಿ ಅಂದು ಅವರು ನೂರ ಎಂಬತ್ತು ಕೋಟಿ ರೂಪಾಯಿಗಳ ಮ್ಯಾಚಿಂಗ್ ಗ್ರಾಂಟ್ ನೀಡಿದ್ದರಿಂದ ಸಾಗರ ರೈಲ್ವೆ ಮಾರ್ಗವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ನಂತರದ ದಿನಗಳಲ್ಲಿ ನಾನು ಸಂಸದನಾದ ಮೇಲೂ ರೈಲ್ವೆ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದ್ದೇನೆ ಎಂದು ತಿಳಿಸಿದರು.
ರೈಲ್ವೆ ಹೋರಾಟ ಸಮಿತಿಯಿಂದ ವಿವಿಧ ಬೇಡಿಕೆಗಳ ಮನವಿ
ಇದೇ ಸಂದರ್ಭದಲ್ಲಿ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ರೈಲ್ವೆ ಹೋರಾಟ ಸಮಿತಿಯು ಸಂಸದರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿತು.

ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಆಗ್ರಹ
ತಾಳಗುಪ್ಪ-ಬೆಂಗಳೂರು ಇಂಟರಸಿಟಿ ರೈಲನ್ನು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ತಾಳಗುಪ್ಪದಿಂದ ಬಿಡಬೇಕು ಹಾಗೂ ಮೈಸೂರು-ಬೆಂಗಳೂರು-ತಾಳಗುಪ್ಪ ರೈಲಿನ ವೇಳಾಪಟ್ಟಿಯನ್ನು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಯಿತು.
ಮೂಲಸೌಕರ್ಯ ಹಾಗೂ ಸ್ವಚ್ಛತೆಗೆ ಆದ್ಯತೆ
ಮೈಸೂರು-ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಇರುವ ಸ್ನಾನಗೃಹ ಹಾಗೂ ಶೌಚಾಲಯಗಳ ಸಮರ್ಪಕ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿಕೊಡಬೇಕು ಎಂದು ಸಮಿತಿ ಒತ್ತಾಯಿಸಿತು.
ರೈಲು ಮಾರ್ಗ ಮತ್ತು ಸೇವೆಗಳ ವಿಸ್ತರಣೆ
ಸದ್ಯ ಚಲಿಸುತ್ತಿರುವ ಯಶವಂತಪುರ-ಶಿವಮೊಗ್ಗ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಬೇಕು. ಇದರೊಂದಿಗೆ, ಬೀರೂರು-ಶಿವಮೊಗ್ಗವರೆಗಿನ ಡಬಲ್ ಲೈನ್ (ದ್ವಿಪಥ) ರೈಲು ಮಾರ್ಗದ ಕಾಮಗಾರಿಯನ್ನು ತಾಳಗುಪ್ಪದವರೆಗೆ ವಿಸ್ತರಿಸಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳನ್ನು ಸಂಸದರ ಮುಂದೆ ಇಡಲಾಯಿತು.
ಗಣ್ಯರ ಉಪಸ್ಥಿತಿ
ಈ ವೇಳೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಉಪಸ್ಥಿತರಿದ್ದು ಪ್ರಾಸಂಗಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಪ್ರಮುಖರಾದ ಕುಮಾರಸ್ವಾಮಿ, ಶಿವಮೂರ್ತಿ, ಹಾಗೂ ಬಿಜೆಪಿ ಮುಖಂಡರಾದ ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಆರ್.ಶ್ರೀನಿವಾಸ್, ಗಣೇಶಪ್ರಸಾದ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್, ಪ್ರೇಮ ಸಿಂಗ್, ಗಾಯತ್ರಿ, ಶ್ವೇತಾ ಸಂತೋಷ್ ಶೇಟ್, ಪ್ರದೀಪ್ ಆಚಾರಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಗರದ ಮಾರಿಕಾಂಬೆ ಸನ್ನಿಧಿಗೆ ಮಂಗಳೂರು ಡಿಆರ್ ರಮೇಶ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ: ಪ್ರತಿಷ್ಠಾನದಿಂದ ಸನ್ಮಾನ








