ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವು “ಎಂದಿಗಿಂತಲೂ ಈಗ ತೀರಾ ಹತ್ತಿರದಲ್ಲಿದೆ” ಮತ್ತು “ಮುಂದಿನ 24 ಗಂಟೆಗಳ ಒಳಗೆ” ಇದು ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಪ್ರತಿಪಾದಿಸಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಒಪ್ಪಂದ ಅಂತಿಮಗೊಳ್ಳಲಿದ್ದು, ಅದರ ಬೆನ್ನಲ್ಲೇ ತಾಂತ್ರಿಕ ಮಟ್ಟದ ಮಾತುಕತೆಗಳು ನಡೆಯಲಿವೆ ಎಂದು ಷರೀಫ್ ತಿಳಿಸಿದ್ದಾರೆ.
ತಮ್ಮ ‘X’ (ಟ್ವಿಟರ್) ಜಾಲತಾಣದ ಪೋಸ್ಟ್ನಲ್ಲಿ ಬರೆದುಕೊಂಡಿರುವ ಅವರು, “ನಾವು ಎಂದಿಗಿಂತಲೂ ಈಗ ಶಾಂತಿ ಒಪ್ಪಂದಕ್ಕೆ ಅತ್ಯಂತ ಹತ್ತಿರವಾಗಿದ್ದೇವೆ. ಮುಂದಿನ 24 ಗಂಟೆಗಳಲ್ಲಿ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿರುವುದರಿಂದ, ಅದರ ತಕ್ಷಣವೇ ಶಾಂತಿ ಒಪ್ಪಂದದ ಎಲೆಕ್ಟ್ರಾನಿಕ್ ಸಹಿ ಪ್ರಕ್ರಿಯೆಗೆ (Electronic signing) ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ. ಇದರ ನಂತರ ಮುಂದಿನ ವಾರ ತಾಂತ್ರಿಕ ಮಟ್ಟದ ಮಾತುಕತೆಗಳು ನಡೆಯಲಿವೆ. ಮಾತುಕತೆಯ ಅವಧಿಯಲ್ಲಿ ನಿರಂತರ ಬದ್ಧತೆ ಪ್ರದರ್ಶಿಸಿದ ಅಮೆರಿಕ ಮತ್ತು ಇಸ್ಲಾಮಿಕ್ ಗಣರಾಜ್ಯ ಇರಾನ್ಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಾಗೆಯೇ ನಮಗೆ ಬೆಂಬಲ ನೀಡಿದ ಈ ಪ್ರದೇಶದ ನಮ್ಮ ಸಹೋದರ ರಾಷ್ಟ್ರಗಳಿಗೆ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಐತಿಹಾಸಿಕ ಶಾಂತಿ ಒಪ್ಪಂದವು ಸುದೀರ್ಘ ಶಾಂತಿಗೆ ಬಲವಾದ ಅಡಿಪಾಯವಾಗಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ.
ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದ ಇರಾನ್
ಮತ್ತೊಂದೆಡೆ, ಪ್ರಸ್ತಾವಿತ ಒಪ್ಪಂದದ ಅಡಿಯಲ್ಲಿ ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಅಥವಾ ಖರೀದಿಸುವುದಿಲ್ಲ ಎಂದು ಭರವಸೆ ನೀಡಿದೆ. ಆದರೆ ಇರಾನ್ ಮೇಲಿನ ನಿರ್ಬಂಧಗಳ ಸಡಿಲಿಕೆಯು ಕಟ್ಟುನಿಟ್ಟಿನ ಪರಿಶೀಲನೆ ಮತ್ತು ತಪಾಸಣೆಗಳಿಗೆ (Verification and inspections) ಒಳಪಟ್ಟಿರುತ್ತದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ (ಸ್ಥಳೀಯ ಕಾಲಮಾನ) ತಿಳಿಸಿದ್ದಾರೆ.
ಮಾತುಕತೆಗಳ ಕುರಿತು ಮಾತನಾಡಿದ ಅಧಿಕಾರಿ, ಈ ಒಪ್ಪಂದಕ್ಕೆ ಇಸ್ರೇಲ್ ಮತ್ತು ಗಲ್ಫ್ ದೇಶಗಳು ಸೇರಿದಂತೆ ಪ್ರಾದೇಶಿಕ ಪಾಲುದಾರ ರಾಷ್ಟ್ರಗಳ ಬೆಂಬಲವಿದೆ ಎಂದು ಹೇಳಿದ್ದಾರೆ.
”ನಮ್ಮ ಎಲ್ಲಾ ಮಿತ್ರರಾಷ್ಟ್ರಗಳು – ಇಸ್ರೇಲ್ ಮತ್ತು ಗಲ್ಫ್ ಒಕ್ಕೂಟಗಳು ಈ ಒಪ್ಪಂದಕ್ಕೆ ಒಪ್ಪಿಗೆ ನೀಡಲಿವೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಹಾಗೆಂದ ಮಾತ್ರಕ್ಕೆ ಅವರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ಬಿಟ್ಟುಕೊಡುತ್ತಾರೆ ಎಂದರ್ಥವಲ್ಲ. ಒಂದು ವೇಳೆ ಇರಾನಿಯನ್ನರು ತಮ್ಮ ಬದ್ಧತೆಯನ್ನು ಗೌರವಿಸದಿದ್ದರೆ, ಇಸ್ರೇಲ್ ಸುಮ್ಮನೆ ಕೂರಲಿದೆ ಎಂದು ನಾನು ನಿರೀಕ್ಷಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.








