ನವದೆಹಲಿ: ಭಾರತದ ನಾಗರಿಕ ವಿಮಾನಯಾನ ಅಪಘಾತ ತನಿಖಾ ಸಂಸ್ಥೆಯಾದ ‘ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ’ (AAIB), ಏರ್ ಇಂಡಿಯಾ ಫ್ಲೈಟ್ AI-171 ಅಪಘಾತದ ತನಿಖೆಯ ಪ್ರಗತಿಗೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಎಲ್ಲಾ ತನಿಖಾ ಪ್ರಕ್ರಿಯೆಗಳು ಹಾಗೂ ಅಗತ್ಯವಿರುವ ಅಂತರರಾಷ್ಟ್ರೀಯ ಪರಿಶೀಲನೆ ಮತ್ತು ಸಮಾಲೋಚನೆಗಳು ಪೂರ್ಣಗೊಂಡ ನಂತರ ಅಪಘಾತದ ಅಂತಿಮ ತನಿಖಾ ವರದಿಯನ್ನು ಪ್ರಕಟಿಸಲಾಗುವುದು ಎಂದು AAIB ತಿಳಿಸಿದೆ.
ಕಳೆದ ವರ್ಷ (ಜೂನ್ 12, 2025 ರಂದು) ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ AI-171 ವಿಮಾನವು, ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ನೆಲದ ಮೇಲಿದ್ದ 19 ಜನರೂ ಸೇರಿ ಒಟ್ಟು 260 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಈ ದುರಂತ ಸಂಭವಿಸಿ ಇಂದಿಗೆ ಭರ್ತಿ ಒಂದು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ AAIB, ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ (Boeing 787-8 Dreamliner) ವಿಮಾನದ ಪತನಕ್ಕೆ ಸಂಬಂಧಿಸಿದ ವಿಮಾನದ ವ್ಯವಸ್ಥೆಗಳು, ಫ್ಲೈಟ್ ರೆಕಾರ್ಡರ್ ಡೇಟಾ (ಬ್ಲ್ಯಾಕ್ ಬಾಕ್ಸ್), ಇಂಜಿನ್ ಬಿಡಿಭಾಗಗಳು, ನಿರ್ವಹಣಾ ದಾಖಲೆಗಳು, ಕಾರ್ಯಾಚರಣೆಯ ದಾಖಲೆಗಳು ಮತ್ತು ಇತರ ಸಾಕ್ಷ್ಯಾಧಾರಗಳ ವಿಶ್ಲೇಷಣೆಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಹೇಳಿದೆ.
ತನ್ನ ಹೇಳಿಕೆಯಲ್ಲಿ ಬ್ಯೂರೋ (AAIB), ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಸ್ಥರಿಗೆ ಮತ್ತು ಅವರ ಆತ್ಮೀಯರಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಈ ದುರಂತದಿಂದ ಪೀಡಿತರಾದವರು ಅನುಭವಿಸುತ್ತಿರುವ ಅಪಾರ ನೋವು ಮತ್ತು ಸಂಕಟವನ್ನು ಸಂಸ್ಥೆಯು ಮರುಕದಿಂದ ಸ್ಮರಿಸಿದೆ.
ಮುಂದುವರಿದು, ಈ ತನಿಖೆಯನ್ನು ವಿಮಾನ (ಅಪಘಾತಗಳು ಮತ್ತು ಘಟನೆಗಳ ತನಿಖೆ) ನಿಯಮಗಳು, 2017 ರ ತಿದ್ದುಪಡಿಗಳ ಅನ್ವಯ ಮತ್ತು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ಅನೆಕ್ಸ್ 13 ರಲ್ಲಿ ಒಳಗೊಂಡಿರುವ ಮಾನದಂಡಗಳು ಹಾಗೂ ಶಿಫಾರಸು ಮಾಡಲಾದ ನಿಯಮಾವಳಿಗಳ ಪ್ರಕಾರವೇ ನಡೆಸಲಾಗುತ್ತಿದೆ ಎಂದು AAIB ಸ್ಪಷ್ಟಪಡಿಸಿದೆ.








