“ಇಬ್ಬರೂ ತಮ್ಮ ವೃತ್ತಿಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ” ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಸಂಜೀವ್ ಸಚ್ದೇವ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಇಬ್ಬರು ಅಧಿಕಾರಿಗಳ ನಡುವಿನ ನಿರಂತರ ಕಾನೂನು ಸಮರಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, “ಇಬ್ಬರೂ ಅಧಿಕಾರಿಗಳು ಈ ನಿರಂತರ ಹೋರಾಟದಿಂದ ಪರಸ್ಪರ ತಮ್ಮ ವೃತ್ತಿಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಸುದೀರ್ಘ ನ್ಯಾಯಾಲಯದ ಪ್ರಕ್ರಿಯೆಗಳಿಗಿಂತ ಮಧ್ಯಸ್ಥಿಕೆಯ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳುವುದು ಸೂಕ್ತ” ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಇಬ್ಬರೂ ಅಧಿಕಾರಿಗಳು ಜಸ್ಟಿಸ್ ಕುರಿಯನ್ ಜೋಸೆಫ್ ಅವರ ಮುಂದೆ ಹಾಜರಾಗಬೇಕು ಎಂದು ಸೂಚಿಸಿದ ಕೋರ್ಟ್, ಮಧ್ಯಂತರ ಪರಿಹಾರವಾಗಿ ಉಭಯ ಅಧಿಕಾರಿಗಳು ಒಬ್ಬರ ಮೇಲೊಬ್ಬರು ದಾಖಲಿಸಿರುವ ಪ್ರಕರಣಗಳ ಮುಂದಿನ ಎಲ್ಲಾ ನಡಾವಳಿಗಳಿಗೆ ತಡೆ (Stay) ನೀಡಿದೆ.
ಪ್ರಕರಣದ ಹಿನ್ನೆಲೆ ಏನು?
-
2023ರ ಫೇಸ್ಬುಕ್ ಪೋಸ್ಟ್ಗಳು: 2023ರ ಫೆಬ್ರವರಿಯಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಸರಣಿ ಆರೋಪಗಳನ್ನು ಮಾಡಿದ್ದರು. ಇದರಲ್ಲಿ ರೋಹಿಣಿ ಅವರು ಜಲಹಳ್ಳಿಯಲ್ಲಿ ದೊಡ್ಡ ಬಂಗಲೆ ನಿರ್ಮಿಸಿದ್ದು, ಅದನ್ನು ಅಖಿಲ ಭಾರತ ಸೇವಾ ನಿಯಮಾವಳಿಗಳ ಪ್ರಕಾರ ಆಸ್ತಿ ವಿವರದಲ್ಲಿ ಘೋಷಿಸಿಲ್ಲ ಎಂಬ ಗಂಭೀರ ಆರೋಪವೂ ಸೇರಿತ್ತು.
-
ರೋಹಿಣಿ ಸಿಂಧೂರಿ ಅವರಿಂದ ಮೊಕದ್ದಮೆ: ಈ ಆರೋಪಗಳ ವಿರುದ್ಧ ರೋಹಿಣಿ ಸಿಂಧೂರಿ ಅವರು ಸಿವಿಲ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು ಮತ್ತು ಮೆಜಿಸ್ಟ್ರೇಟ್ ಕೋರ್ಟ್ನಲ್ಲಿ ಖಾಸಗಿ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ರೂಪಾ ಹೈಕೋರ್ಟ್ ಮೆಟ್ಟಿಲೇರಿದ್ದರು. ತದನಂತರ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರೂಪಾ ಅವರು ವಿವಾದಾತ್ಮಕ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದರು.
-
ರೂಪಾ ಅವರಿಂದ ಪ್ರತಿಯಾಗಿ ದೂರು: ಇದರ ನಂತರ, ಡಿ. ರೂಪಾ ಅವರು ಡಿಸೆಂಬರ್ 2024 ರಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹೊಸದಾಗಿ ಮಾನನಷ್ಟ ದೂರು ದಾಖಲಿಸಿದರು. ರೋಹಿಣಿ ಅವರು ತಮ್ಮನ್ನು “ಮಾನಸಿಕ ಅಸ್ವಸ್ಥರು” ಎಂದು ಕರೆಯುವ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಆದೇಶ ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ: ಇತ್ತೀಚೆಗೆ ಕರ್ನಾಟಕ ಹೈಕೋರ್ಟ್, ರೋಹಿಣಿ ಸಿಂಧೂರಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ನಡಾವಳಿಗಳನ್ನು ರದ್ದುಗೊಳಿಸಲು ನಿರಾಕರಿಸಿ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ (SLP) ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈಗ ಇಬ್ಬರು ಹಿರಿಯ ಅಧಿಕಾರಿಗಳ ನಡುವಿನ ಈ ಜಿದ್ದಾಜಿದ್ದಿಗೆ ಪೂರ್ಣವಿರಾಮ ಇಡಲು ನಿವೃತ್ತ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಸಂಧಾನದ ಹಾದಿ ಸುಗಮಗೊಳಿಸಿದೆ.