ಬುಧವಾರದಂದು ಓಮನ್ ಕರಾವಳಿಯ ಬಳಿ ಪಲಾವ್ (Palau) ಧ್ವಜದ ‘ಎಂಟಿ ಸೆಟ್ಟೆಬೆಲ್ಲೊ’ (MT Settebello) ವಾಣಿಜ್ಯ ಹಡಗಿನ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಮೂವರು ಭಾರತೀಯ ನಾವಿಕರು ಭಾರತದ ವಿವಿಧ ಭಾಗಗಳವರಾಗಿದ್ದರು. ಆದರೆ ಅವರೆಲ್ಲರೂ ತಮ್ಮ ಕುಟುಂಬಕ್ಕೆ ಉತ್ತಮ ಜೀವನವನ್ನು ನೀಡಬೇಕೆಂಬ ಒಂದೇ ಕನಸಿನೊಂದಿಗೆ ವಿದೇಶಿ ಜಲಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು.
ವಿಶಾಖಪಟ್ಟಣಂನ ಮರೈನ್ ಇಂಜಿನಿಯರ್ ಪಟ್ನಾಲ ಸುರೇಶ್ (44), ಉತ್ತರ ಪ್ರದೇಶದ ಡಿಯೋರಿಯಾದ ಸುರೌಲಿ ಗ್ರಾಮದ ಶಿವಾನಂದ್ ಚೌರಾಸಿಯಾ (38) ಮತ್ತು ಹಿಮಾಚಲ ಪ್ರದೇಶದ ಹಮಿರ್ಪುರದ ಆದಿತ್ಯ ಶರ್ಮಾ (23) ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು, ಆದರೆ ನಂತರ ಅವರು ಮೃತಪಟ್ಟಿರುವುದು ಖಚಿತವಾಗಿದೆ; ಹಡಗಿನಲ್ಲಿದ್ದ ಇತರ 21 ಭಾರತೀಯ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.
ಮೇ 24 ರಂದು ಮುಕ್ತಾಯಗೊಳ್ಳಬೇಕಿದ್ದ ಆರು ತಿಂಗಳ ಒಪ್ಪಂದಕ್ಕೆ ಆದಿತ್ಯ ಶರ್ಮಾ ಆರಂಭದಲ್ಲಿ ಒಳಪಟ್ಟಿದ್ದರು. ಆದರೆ ಮನೆಗೆ ಬರುವ ಮುನ್ನ ತನಗೆ ಅಗತ್ಯವಿದ್ದ ತರಬೇತಿಯ ಅರ್ಧದಷ್ಟು ಭಾಗವನ್ನು ಪೂರ್ಣಗೊಳಿಸುವ ಏಕೈಕ ಉದ್ದೇಶದಿಂದ ಅವರು ತಮ್ಮ ವಾಸ್ತವ್ಯವನ್ನು ಇನ್ನೂ ಎರಡು ತಿಂಗಳವರೆಗೆ ಇಷ್ಟವಿಲ್ಲದಿದ್ದರೂ ವಿಸ್ತರಿಸಿದ್ದರು. ಅವರು ಸ್ಕಾಟ್ಲ್ಯಾಂಡ್ನ ವಿಶ್ವವಿದ್ಯಾಲಯವೊಂದರಿಂದ ನಾಟಿಕಲ್ ಸೈನ್ಸ್ನಲ್ಲಿ (ನೌಕಾಯಾನ ವಿಜ್ಞಾನ) ಪದವಿ ಪಡೆದಿದ್ದರು. ಅವರ ತಂದೆ ರಾಜೇಶ್ ಶರ್ಮಾ ಅವರಿಗೆ ತಮ್ಮ ಮಗನಿಂದ ಬಂದ ಕೊನೆಯ ಸಂದೇಶವು ‘ಎಂಟಿ ಸೆಟ್ಟೆಬೆಲ್ಲೊ’ ಹಡಗಿನ ಮೇಲೆ ದಾಳಿ ನಡೆಯುವ ಕೇವಲ ಒಂದು ಗಂಟೆ ಮುಂಚಿತವಾಗಿ ತಲುಪಿತ್ತು.
”ಬುಧವಾರ, ನಾವು ಇಡೀ ದಿನ ಆತನ ಕರೆಯ ಪ್ರತಿಕ್ರಿಯೆಗಾಗಿ ಕಾದಿದ್ದೆವು. ನಂತರ, ರಾತ್ರಿ ಸುಮಾರು 9 ಗಂಟೆಗೆ, ಹಡಗಿನ ಮೇಲೆ ದಾಳಿ ನಡೆದಿದೆ ಮತ್ತು ಮೂವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು” ಎಂದು ತಂದೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮಗ ಮತ್ತು ಇತರ ಇಬ್ಬರು ಸಿಬ್ಬಂದಿಯ ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ಅಧಿಕೃತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. “ನನ್ನ ಮಗನ ಪಾರ್ಥಿವ ಶರೀರವನ್ನು ಮರಳಿ ಪಡೆಯಲು ನನಗೆ ಸಹಾಯ ಮಾಡುವಂತೆ ಸಂಸದ ಅನುರಾಗ್ ಠಾಕೂರ್, [ಹಿಮಾಚಲ ಪ್ರದೇಶ] ಸಿಎಂ ಸುಖು, ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮತ್ತು ಪಿಎಂ ಮೋದಿ ಅವರಲ್ಲಿ ನಾನು ಮನವಿ ಮಾಡುತ್ತೇನೆ. ಮೂವರ ಸಾವಿಗೆ ಕಾರಣವಾದ ಸಂದರ್ಭಗಳು ಏನೆಂಬುದನ್ನು ನಾನು ತಿಳಿಯಲು ಬಯಸುತ್ತೇನೆ. ಹಡಗಿನ ಕ್ಯಾಪ್ಟನ್ ಆ ಹಡಗನ್ನು ಅಪಾಯಕಾರಿ ವಲಯದ ಕಡೆಗೆ ಕೊಂಡೊಯ್ಯಲು ಏಕೆ ನಿರ್ಧರಿಸಿದರು ಎಂಬುದರ ಬಗ್ಗೆ ತನಿಖೆಯಾಗಬೇಕು” ಎಂದಿದ್ದಾರೆ.
ಸುರೌಲಿ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಅವಿನಾಶ್ ಮೌರ್ಯ ಮಾತನಾಡಿ, ಶಿವಾನಂದ್ ಅವರು ರಾಮ್ಜಿ ಚೌರಾಸಿಯಾ ಅವರ ಹಿರಿಯ ಮಗನಾಗಿದ್ದರು. ಅವರು ತಾಯಿ ಕಲಾವತಿ ದೇವಿ (60), ಪತ್ನಿ ಸುಶೀಲಾ ದೇವಿ (31), ಏಳು ವರ್ಷದ ಮಗ ರಾಜ್ವೀರ್ ಮತ್ತು ಎರಡು ವರ್ಷದ ಮಗಳು ವಾಮಿಕಾ ಅವರನ್ನು ಅಗಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ಜಿ ಚೌರಾಸಿಯಾ (ಅವರು ಕೃಷಿಕರಾಗಿದ್ದು, ವೀಳ್ಯದೆಲೆ ಅಂಗಡಿಯನ್ನೂ ನಡೆಸುತ್ತಿದ್ದಾರೆ), ಶಿವಾನಂದ್ ತನ್ನ ಪತ್ನಿಗೆ ಜೂನ್ 9 ರಂದು ಕೊನೆಯ ಬಾರಿಗೆ ಫೋನ್ ಮಾಡಿದ್ದನು. ಅಂದಿನಿಂದ ಆತನ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಹೇಳಿದರು.
ತಮ್ಮ ಕಿರಿಯ ಮಗ ರಾಮ್ ಪರ್ವೇಶ್ ಚೌರಾಸಿಯಾ ದುಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ ಪ್ರದೇಶವೂ ಸಹ ಪ್ರಸ್ತುತ ಭದ್ರತಾ ಕಾಳಜಿಯನ್ನು ಎದುರಿಸುತ್ತಿದೆ ಎಂದು ರಾಮ್ಜಿ ತಿಳಿಸಿದ್ದಾರೆ.
ಹಡಗಿನಲ್ಲಿದ್ದ ಮುಖ್ಯ ಇಂಜಿನಿಯರ್ ಪಟ್ನಾಲ ಸುರೇಶ್ ಅವರ ಸಾವಿನ ಸುದ್ದಿ ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಕುಟುಂಬವನ್ನು ತಲುಪಿದೆ. “ನಿನ್ನೆ ರಾತ್ರಿ ವಾಣಿಜ್ಯ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿರುವ ಬಗ್ಗೆ ನನಗೆ ಸಂದೇಶ ಬಂದಿತ್ತಾದರೂ, ನನ್ನ ಪತಿಯ ಸಾವಿನ ಅಧಿಕೃತ ದೃಢೀಕರಣವು ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಬಂದಿತು” ಎಂದು ಸುರೇಶ್ ಅವರ ಪತ್ನಿ ಭಾರ್ಗವಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುರೇಶ್ ಅವರಿಗೆ 13 ಮತ್ತು 10 ವರ್ಷದ ಇಬ್ಬರು ಸಣ್ಣ ಗಂಡು ಮಕ್ಕಳಿದ್ದಾರೆ.
”ನಾವು ಇನ್ನೊಂದು ವಾರದಲ್ಲಿ ಅವರು ಮನೆಗೆ ಬರುವುದನ್ನು ನಿರೀಕ್ಷಿಸುತ್ತಿದ್ದೆವು. ಜೂನ್ 24 ರಂದು ನಾವು ನಮ್ಮ 15 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಬೇಕಿತ್ತು” ಎಂದು ಭಾರ್ಗವಿ ಕಣ್ಣೀರಿಟ್ಟಿದ್ದಾರೆ.








