ಬೆಂಗಳೂರು: ಕರ್ನಾಟಕ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಹೆಚ್ಚಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಸರ್ಕಾರದ ಸಚಿವಾಲಯದ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆಗಳಲ್ಲಿ ಸ್ವೀಕೃತಿ ಮತ್ತು ಕಡತಗಳ (Files) ನಿರ್ವಹಣೆಯನ್ನು ಕಡ್ಡಾಯವಾಗಿ ‘ಇ-ಕಚೇರಿ’ (e-Office) ತಂತ್ರಾಂಶದ ಮೂಲಕವೇ ನಿರ್ವಹಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಶಿಫಾರಸುಗಳ ಅನ್ವಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಸುಬೋಧ್ ಯಾದವ್ ಅವರು ಜೂನ್ 6, 2026 ರಂದು ಈ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಇ-ಅಫೀಸ್ ಮೂಲಕವೇ ಪ್ರಸ್ತಾವನೆ: ಇಲಾಖಾ ಮುಖ್ಯಸ್ಥರು ಸಚಿವಾಲಯದ ಇಲಾಖೆಗಳಿಗೆ ಯಾವುದೇ ಪ್ರಸ್ತಾವನೆಗಳನ್ನು ಕಳುಹಿಸುವಾಗ, ಸ್ಕ್ಯಾನ್ ಮಾಡಿದ ಏಕ ಕಡತದ ಮೂಲಕ ಇ-ಆಫೀಸ್ನಲ್ಲಿ ಮಾತ್ರ ಕಡತಗಳನ್ನು ಕಳುಹಿಸಬೇಕು.
ಭೌತಿಕ ಪತ್ರಗಳಿಗೆ ನೋ ಎಂಟ್ರಿ: ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಇನ್ಮುಂದೆ ಕಾಗದದ (Physical) ಮೂಲಕ ಕಳುಹಿಸಲಾಗುವ ಪತ್ರಗಳು ಮತ್ತು ಪ್ರಸ್ತಾವನೆಗಳನ್ನು ಸಚಿವಾಲಯದ ಇಲಾಖೆಗಳು ಸ್ವೀಕರಿಸದೆ ನೇರವಾಗಿ ಹಿಂತಿರುಗಿಸಲಿವೆ.
ಸಮನಾಂತರ ವ್ಯವಸ್ಥೆಗೆ ಬ್ರೇಕ್: ಕೆಲವು ಕಚೇರಿಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಇ-ಆಫೀಸ್ ಕಡತ ಮತ್ತು ಭೌತಿಕ ಕಡತಗಳನ್ನು ಸಮನಾಂತರವಾಗಿ (Parallel) ನಿರ್ವಹಿಸುವ ವ್ಯವಸ್ಥೆಯನ್ನು ತಕ್ಷಣದಿಂದಲೇ ನಿಲ್ಲಿಸಲು ಸೂಚಿಸಲಾಗಿದೆ.
ಸಮಯದ ಉಳಿತಾಯ: ಇ-ಕಚೇರಿಯಲ್ಲಿ ಕಡತಗಳನ್ನು ಟಿಪ್ಪಣಿಯೊಂದಿಗೆ ಸಲ್ಲಿಸುವಾಗಲೇ ಕರಡು ಪತ್ರ/ಆದೇಶಗಳನ್ನೂ ಸಹ ಮೇಲಾಧಿಕಾರಿಗಳ ಅನುಮೋದನೆಗೆ ಕಳುಹಿಸಬೇಕು. ಇದರಿಂದ ಅನುಮೋದನೆಯ ನಂತರ ಮತ್ತೊಮ್ಮೆ ಕರಡುಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ ಮತ್ತು ಆಡಳಿತಾತ್ಮಕ ಸಮಯ ಭಾರಿ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ. ಈ ನಿಯಮ ಕ್ಷೇತ್ರ ಇಲಾಖೆಗಳಿಗೂ ಅನ್ವಯಿಸುತ್ತದೆ.
ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ: ಈ ಮೇಲಿನ ಎಲ್ಲಾ ಸೂಚನೆಗಳನ್ನು ತಮ್ಮ ಇಲಾಖೆ ಹಾಗೂ ತಮ್ಮ ಅಧೀನದ ಎಲ್ಲಾ ಕ್ಷೇತ್ರ ಇಲಾಖೆಗಳ ಅಧಿಕಾರಿ ಮತ್ತು ನೌಕರರು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಕ್ತ ನಿರ್ದೇಶನ ನೀಡಲು ರಾಜ್ಯದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೆ ಸರ್ಕಾರ ಆದೇಶಿಸಿದೆ.
ಈ ಕ್ರಮದಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಕಡತಗಳ ವಿಲೇವಾರಿ ವೇಗವಾಗಿ ನಡೆಯಲಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಿಲ್ಲದೆ ಪೂರ್ಣಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.









