ಬೆಂಗಳೂರು: ಗೃಹ ನಿರ್ಮಾಣ ಮಾಡಿಕೊಂಡಿರುವ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. 2400 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ಒಮ್ಮೆಗಿನ ವಿನಾಯಿತಿ ನೀಡಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮೀಸಾಗರ್ ಎನ್.ಕೆ. ಅವರು ಜೂನ್ 5, 2026 ರಂದು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೆ?
ಹಿಂದೆ (ಅಕ್ಟೋಬರ್ 13, 2025 ರ ಆದೇಶದಂತೆ) ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಲ್ಲಿ ಕೇವಲ 1200 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ನೆಲ+2 ಅಂತಸ್ತು ಅಥವಾ ಸ್ಟಿಲ್ಟ್+3 ಅಂತಸ್ತುಗಳವರೆಗಿನ ವಸತಿ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ನೀಡಲಾಗಿತ್ತು.
ಆದರೆ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಲು ಮತ್ತು ಸಹಕಾರಿಯಾಗಲೆಂದು ಸರ್ಕಾರವು ಇದೀಗ ಈ ನಿಯಮವನ್ನು ಮತ್ತಷ್ಟು ಸಡಿಲಗೊಳಿಸಿದೆ. ನೂತನ ಆದೇಶದ ಅನ್ವಯ:
2400 ಚದರ ಅಡಿವರೆಗಿನ (+ 20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಿಗೆ ವಿನಾಯಿತಿ ಅನ್ವಯಿಸುತ್ತದೆ.
ಈ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+3 (ನೆಲ+3) ಅಂತಸ್ಸಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ‘ಸ್ವಾಧೀನಾನ್ಭವ ಪ್ರಮಾಣ ಪತ್ರ’ (OC) ಕಡ್ಡಾಯದಿಂದ ಒಂದು ಬಾರಿಗೆ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಪೂರ್ಣಗೊಂಡಿರುವ ಇಂತಹ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ದಿನಾಂಕ: 31-05-2026ರ ಒಳಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ, ವಿದ್ಯುತ್ ಸಂಪರ್ಕ ಪಡೆಯಲು ಒಂದು ಬಾರಿಗೆ ಈ ವಿನಾಯಿತಿ ಸಿಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತಪಾಸಣೆ ಕಡ್ಡಾಯ:
ಕಟ್ಟಡವು ಪೂರ್ಣಗೊಂಡಿರುವುದನ್ನು ಹಾಗೂ ಆದೇಶದ ನಿಯಮಾವಳಿಗಳ ಅನ್ವಯ ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಸರಬರಾಜು ಕಂಪನಿಗಳು (ಬೆಸ್ಕಾಂ) ಸ್ಥಳ ತನಿಖೆ ನಡೆಸಲಿವೆ. ಅಲ್ಲದೆ, ಸದರಿ ಕಟ್ಟಡದ ಭಾವಚಿತ್ರವನ್ನು ತೆಗೆದು ದಾಖಲಿಸಿಕೊಂಡು ಬಳಿಕವಷ್ಟೇ ವಿದ್ಯುತ್ ಸಂಪರ್ಕ ನೀಡುವಂತೆ ಇಲಾಖೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಜೂನ್ 3, 2026 ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ (ಪ್ರಕರಣ ಸಂಖ್ಯೆ: ಸಿ:310/2026) ಈ ಮಹತ್ವದ ಆದೇಶವನ್ನು ಹೊರಡಿಸಲಾಗಿದ್ದು, ಇದರಿಂದಾಗಿ ಬೆಂಗಳೂರಿನ ಮಧ್ಯಮ ವರ್ಗದ ಸಾವಿರಾರು ಮನೆ ಮಾಲೀಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.









