ನವದೆಹಲಿ: ಶುಕ್ರವಾರ ನಡೆದ ಅಂಡರ್-18 ಪುರುಷರ ಏಷ್ಯಾ ಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ, ಭಾರತದ ಯುವ ಹಾಕಿ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 5-3 ಅಂತರದಿಂದ ಐತಿಹಾಸಿಕ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಅಂತಿಮ ಕ್ವಾರ್ಟರ್ ವರೆಗೂ 2-3 ಹಿನ್ನಡೆಯಲ್ಲಿದ್ದ ಭಾರತ, ಕೊನೆಯ ನಿಮಿಷಗಳಲ್ಲಿ ಅದ್ಭುತ ಆಕ್ರಮಣಕಾರಿ ಆಟ ಪ್ರದರ್ಶಿಸಿ ಗೆಲುವಿನ ನಗೆ ಬೀರಿದೆ.
ಪಂದ್ಯದ 12ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ಫಾರ್ವರ್ಡ್ ಆಟಗಾರ ಆಶಿಶ್ ತಾನಿ ಪುರ್ತಿ ಅವರು ಅದನ್ನು ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಎರಡನೇ ಕ್ವಾರ್ಟರ್ನಲ್ಲಿ ಪಾಕಿಸ್ತಾನ ಆಕ್ರಮಣಕಾರಿ ಆಟ ಪ್ರದರ್ಶಿಸಿತು. 27ನೇ ನಿಮಿಷದಲ್ಲಿ ಪಾಕಿಸ್ತಾನದ ಆದಿಲ್ ಗೋಲು ಗಳಿಸುವ ಮೂಲಕ ಪಂದ್ಯವನ್ನು 1-1 ಸಮಬಲಗೊಳಿಸಿದರು.
ಮೂರನೇ ಕ್ವಾರ್ಟರ್ನಲ್ಲಿ ಪಾಕಿಸ್ತಾನದ ಮೇಲುಗೈ: 35ನೇ ನಿಮಿಷದಲ್ಲಿ ಭಾರತದ ಶಾಹರುಖ್ ಅಲಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರಾದರೂ, 37ನೇ ನಿಮಿಷದಲ್ಲಿ ಪಾಕಿಸ್ತಾನದ ಮುಹಮ್ಮದ್ ಫರ್ಹಾನ್ ಅಸ್ಲಾಂ ಗೋಲು ಗಳಿಸಿ ಸಮಬಲಗೊಳಿಸಿದರು. ನಂತರ 42ನೇ ನಿಮಿಷದಲ್ಲಿ ಉಜೈರ್ ಅಹ್ಮದ್ ಖುರೇಷಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದ್ದರು.
ಟೂರ್ನಿಯಲ್ಲಿ ಉಳಿಯಲೇಬೇಕಾದ ಅನಿವಾರ್ಯತೆಯಲ್ಲಿ ಭಾರತ ಕೊನೆಯ ಕ್ವಾರ್ಟರ್ನಲ್ಲಿ ಬಿರುಗಾಳಿಯಂತೆ ಆಕ್ರಮಣ ಮಾಡಿತು.
ಆಶಿಶ್ ಪುರ್ತಿ ಹ್ಯಾಟ್ರಿಕ್ ಹಾಗೂ ನಾಲ್ಕನೇ ಗೋಲು: 49ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಆಶಿಶ್ ಪುರ್ತಿ ಪಂದ್ಯವನ್ನು 3-3ಕ್ಕೆ ಸಮಬಲಗೊಳಿಸಿದರು. ನಂತರ 53ನೇ ನಿಮಿಷದಲ್ಲಿ ಮತ್ತೆ ಗೋಲು ಗಳಿಸಿ ಹ್ಯಾಟ್ರಿಕ್ ಪೂರೈಸಿದರಲ್ಲದೆ, 56ನೇ ನಿಮಿಷದಲ್ಲಿ ತಮ್ಮ ನಾಲ್ಕನೇ ಗೋಲನ್ನು ಬಾರಿಸಿ ಭಾರತದ ಮುನ್ನಡೆಯನ್ನು 5-3ಕ್ಕೆ ವಿಸ್ತರಿಸಿದರು.
ಕೊನೆಯ ನಿಮಿಷಗಳಲ್ಲಿ ಭಾರತೀಯ ಆಟಗಾರರು ತಾಳ್ಮೆಯಿಂದ ರಕ್ಷಣಾತ್ಮಕ ಆಟವಾಡಿ ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸಿ, ಗೆಲುವನ್ನು ಖಚಿತಪಡಿಸಿಕೊಂಡರು.
ಅಂಡರ್-18 ಏಷ್ಯಾ ಕಪ್ನ ಫೈನಲ್ ಪಂದ್ಯದಲ್ಲಿ ಭಾರತವು ಜಪಾನ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಶನಿವಾರ ಮಧ್ಯಾಹ್ನ 3:30ಕ್ಕೆ ನಡೆಯಲಿದೆ.








