ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ವಾರ್ಷಿಕ ವೇತನ ಬಡ್ತಿ (Annual Increment) ಪ್ರಾಪ್ತವಾಗುವ ದಿನಾಂಕಕ್ಕಿಂತ ಕೇವಲ ಒಂದು ದಿನ ಮುಂಚಿತವಾಗಿ ಸೇವೆಯಿಂದ ನಿವೃತ್ತಿ ಹೊಂದುವ ನೌಕರರಿಗೂ ಸಹ ಒಂದು ‘ಕಾಲ್ಪನಿಕ ವಾರ್ಷಿಕ ವೇತನ ಬಡ್ತಿ’ಯನ್ನು (Notional Annual Increment) ಮಂಜೂರು ಮಾಡಿ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ನಿವೃತ್ತಿ ಹೊಂದುತ್ತಿರುವ ಸಾವಿರಾರು ನೌಕರರ ಮಾಸಿಕ ಪಿಂಚಣಿ ಹೆಚ್ಚಳವಾಗಲಿದ್ದು, ನಿವೃತ್ತ ನೌಕರರ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ಆದೇಶದ ಹಿನ್ನೆಲೆ ಏನು?
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 51(1) ರ ಪ್ರಕಾರ, ವಾರ್ಷಿಕ ವೇತನ ಬಡ್ತಿಯು “ಅದನ್ನು ಗಳಿಸಿದ ದಿನದ ಮರುದಿನದಿಂದ” ಜಾರಿಗೆ ಬರುತ್ತದೆ. ಇದರಿಂದಾಗಿ ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೂ, ವೇತನ ಬಡ್ತಿ ಸಿಗುವ ಹಿಂದಿನ ದಿನವೇ ವಯೋನಿವೃತ್ತಿ ಹೊಂದುವ ನೌಕರರು ಕೇವಲ ಒಂದು ದಿನದ ತಾಂತ್ರಿಕತೆಯ ಆಧಾರದ ಮೇಲೆ ತಮಗೆ ಸಿಗಬೇಕಾದ ಕೊನೆಯ ವೇತನ ಬಡ್ತಿಯ ಲಾಭದಿಂದ ವಂಚಿತರಾಗುತ್ತಿದ್ದರು. ಇದು ಅವರ ಒಟ್ಟಾರೆ ಪಿಂಚಣಿ ಲೆಕ್ಕಾಚಾರದ ಮೇಲೂ ಭಾರಿ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು.
ಈ ತಾರತಮ್ಯದ ವಿರುದ್ಧ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KSAT) ನೀಡಿದ್ದ ಮಹತ್ವದ ತೀರ್ಪುಗಳನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಪ್ರಸಕ್ತ ಸಾಲಿನ ಜೂನ್ 4ರಂದು (ಆದೇಶ ಸಂಖ್ಯೆ: ಆಇ 3 ಎಸ್ಆರ್ಎಸ್ 2026) ಈ ಐತಿಹಾಸಿಕ ಆದೇಶವನ್ನು ಹೊರಡಿಸಿದೆ.
ಪ್ರಮುಖ ಶರತ್ತುಗಳು ಮತ್ತು ನಿಯಮಗಳು:
ಸರ್ಕಾರದ ಈ ಆದೇಶವು ಕೆಲವು ನಿರ್ದಿಷ್ಟ ಶರತ್ತುಗಳಿಗೊಳಪಟ್ಟು ಜಾರಿಗೆ ಬರಲಿದೆ ಎಂದು ಆರ್ಥಿಕ ಇಲಾಖೆಯ (ಸೇವೆಗಳು-1) ಉಪ ಕಾರ್ಯದರ್ಶಿ ಎನ್. ವನಿತಾ ತಿಳಿಸಿದ್ದಾರೆ:
ಕೇವಲ ಪಿಂಚಣಿ ಲೆಕ್ಕಾಚಾರಕ್ಕೆ ಮಾತ್ರ: ಈ ಕಾಲ್ಪನಿಕ ವೇತನ ಬಡ್ತಿಯನ್ನು ನೌಕರನ ಕೊನೆಯ ವೇತನಕ್ಕೆ ಸೇರಿಸಿ, ಕೇವಲ ‘ಮಾಸಿಕ ಪಿಂಚಣಿ’ ಲೆಕ್ಕಾಚಾರದ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಲಾಗುತ್ತದೆ.
ಇತರ ಸೌಲಭ್ಯಗಳಿಗೆ ಅನ್ವಯಿಸಲ್ಲ: ಈ ಬಡ್ತಿಯನ್ನು ನಿವೃತ್ತಿ ಉಪದನ (D.C.R.G.), ಪರಿವರ್ತಿತ ಪಿಂಚಣಿ (Commutation) ಅಥವಾ ಗಳಿಕೆ ರಜೆ ನಗದೀಕರಣ ಒಳಗೊಂಡಂತೆ ಯಾವುದೇ ಇತರೆ ನಿವೃತ್ತಿ/ಸೇವಾಂತ್ಯ ಸೌಲಭ್ಯಗಳ ಲೆಕ್ಕಾಚಾರಕ್ಕೆ ಬಳಸುವಂತಿಲ್ಲ.
ಭವಿಷ್ಯವರ್ತಿಯಾಗಿ ಅನ್ವಯ: ಈ ಆರ್ಥಿಕ ಪ್ರಯೋಜನಗಳು ಆದೇಶ ಹೊರಬಿದ್ದ ದಿನಾಂಕದಿಂದ ಭವಿಷ್ಯವರ್ತಿಯಾಗಿ (Prospective) ಲಭ್ಯವಾಗಲಿವೆ. ಯಾವುದೇ ಹಳೆಯ ಬಾಕಿ (Arrears) ಹಣ ಸಿಗುವುದಿಲ್ಲ.
ಕುಟುಂಬ ಪಿಂಚಣಿದಾರರಿಗೂ ಅನ್ವಯ: ಅರ್ಹ ಪಿಂಚಣಿದಾರರು ಮೃತಪಟ್ಟಲ್ಲಿ, ಅವರ ಕುಟುಂಬ ಪಿಂಚಣಿದಾರರಿಗೂ ಈ ಸೌಲಭ್ಯ ದೊರೆಯಲಿದೆ.
ಯಾರಿಗೆ ಅನ್ವಯಿಸುವುದಿಲ್ಲ?: ಸೇವೆಯಲ್ಲಿದ್ದಾಗಲೇ ಮೃತಪಟ್ಟ ಪ್ರಕರಣಗಳು (ಇವುಗಳನ್ನು ನಿವೃತ್ತಿ ಎಂದು ಪರಿಗಣಿಸಲಾಗುವುದಿಲ್ಲ) ಹಾಗೂ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಗೆ ಒಳಗಾದ ನೌಕರರಿಗೆ ಈ ಆದೇಶ ಅನ್ವಯಿಸುವುದಿಲ್ಲ. ಅಲ್ಲದೆ, ಸ್ಥಗಿತ ವೇತನ ಬಡ್ತಿಗೂ (Stagnation Increment) ಇದು ಅನ್ವಯಿಸುವುದಿಲ್ಲ.
ಈ ನೂತನ ನಿಯಮಾವಳಿಗಳ ಅನುಷ್ಠಾನಕ್ಕೆ ಅನುಗುಣವಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಿಗೆ (KCSR) ಶೀಘ್ರದಲ್ಲೇ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸರ್ಕಾರ ತಿಳಿಸಿದೆ. ಇನ್ಮುಂದೆ ಪಿಂಚಣಿ ಮಂಜೂರಾತಿ ಪ್ರಾಧಿಕಾರಗಳು ಹಾಗೂ ಮಹಾಲೇಖಪಾಲರ (AG) ಕಚೇರಿಯು ಈ ಹೊಸ ಆದೇಶದ ಅನ್ವಯವೇ ನಿವೃತ್ತಿ ವೇತನವನ್ನು ನಿಗದಿಪಡಿಸಲಿವೆ.









