ಭೋಪಾಲ್: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ‘ನೀಟ್-ಯುಜಿ’ (NEET-UG) ಪರೀಕ್ಷೆ ಅಕ್ರಮ ಹಾಗೂ ಮರುಪರೀಕ್ಷೆಯ ಆತಂಕಕ್ಕೆ ಮತ್ತೊಂದು ಬಲಿಯಾಗಿದೆ. ಪರೀಕ್ಷಾ ಪತ್ರಿಕೆ ಸೋರಿಕೆ ಹಗರಣದಿಂದಾಗಿ ಪರೀಕ್ಷೆ ರದ್ದಾದ ಬೆನ್ನಲ್ಲೇ ತೀವ್ರ ಖಿನ್ನತೆಗೆ ಒಳಗಾಗಿದ್ದ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ವಿದ್ಯಾರ್ಥಿನಿ ಆಕಾಂಕ್ಷಾ ಚತುರ್ವೇದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ನೋಟ್ ಬರೆದಿಟ್ಟು ಆಕಾಂಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದು, “ನನಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಧೈರ್ಯವಿಲ್ಲ” ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಆಕಾಂಕ್ಷಾ ಭಾಗವಹಿಸಿದ್ದರು. ಪರೀಕ್ಷೆ ಚೆನ್ನಾಗಿ ಆಗಿದ್ದರಿಂದ ಸುಮಾರು 650 ಅಂಕಗಳು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆಕೆಯ ತಂದೆ ಕೃಷ್ಣ ಕುಮಾರ್ ಚತುರ್ವೇದಿ ವೃತ್ತಿಯಲ್ಲಿ ರೈತರಾಗಿದ್ದು, ಮಗಳನ್ನು ವೈದ್ಯೆಯನ್ನಾಗಿ ಮಾಡಲು ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿ ಸಾಲ ಮಾಡಿದ್ದರು. ನಾಗ್ಪುರದಲ್ಲಿ ಮಗಳಿಗೆ ಕೋಚಿಂಗ್ ಕೊಡಿಸಲು ತಂದೆ ಅಲ್ಲಿಯೇ ಅಡುಗೆಯವನಾಗಿಯೂ ಕೆಲಸ ಮಾಡುತ್ತಿದ್ದರು. ಆದರೆ, ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 12 ರಂದು ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21 ಕ್ಕೆ ಮರುಪರೀಕ್ಷೆ ಘೋಷಿಸಿತ್ತು.
ಹೃದಯ ವಿದ್ರಾವಕ ಡೆತ್ನೋಟ್
ಪರೀಕ್ಷೆ ರದ್ದತಿ ಮತ್ತು ಭವಿಷ್ಯದ ಬಗೆಗಿನ ಅನಿಶ್ಚಿತತೆಯಿಂದಾಗಿ ಆಕಾಂಕ್ಷಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಅವರ ಕೋಣೆಯಲ್ಲಿ ಸಿಕ್ಕಿರುವ ಡೆತ್ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದೆ:
“ಅಮ್ಮ-ಅಪ್ಪ, ನಿಮ್ಮ ಮಗಳು ಓದಿ ವೈದ್ಯೆಯಾಗುತ್ತಾಳೆ ಎಂದು ನೀವು ನಂಬಿದ್ದಿರಿ. ಆದರೆ ನನಗೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ನಾನು ನಿಮ್ಮಿಬ್ಬರನ್ನೂ ಹಾಳು ಮಾಡಿದ್ದೇನೆ. ಮುಂದಿನ ಬಾರಿ ಪರೀಕ್ಷೆ ಬರೆದರೆ ನಾನು ಚೆನ್ನಾಗಿ ಪ್ರದರ್ಶನ ನೀಡುತ್ತೇನೆ ಎಂಬ ಗ್ಯಾರಂಟಿ ನನಗಿಲ್ಲ ಎಂದು ಆಕಾಂಕ್ಷಾ ಡೆತ್ ನೋಟ್ ಬರೆದಿಟ್ಟಿದ್ದಾರೆ.
ನೀಟ್ ಪರೀಕ್ಷೆಯ ಗೊಂದಲ ಮತ್ತು ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಜಾರ್ಖಂಡ್ನ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಕೂಡ ನೀಟ್ ವಿವಾದದ ಹಿನ್ನೆಲೆಯಲ್ಲಿ ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೆಹಲಿಯಲ್ಲಿ ಕೋಚಿಂಗ್ ಪಡೆದು ಬಂದಿದ್ದ ಆಕೆ, ಪರೀಕ್ಷೆಯ ನಂತರ ಸೃಷ್ಟಿಯಾದ ಗೊಂದಲಗಳಿಂದಾಗಿ ಮನನೊಂದಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರಸ್ತುತ ದೇಶಾದ್ಯಂತ ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆಕ್ರೋಶ ಹಾಗೂ ಆತಂಕ ಮನೆಮಾಡಿದೆ.








